ಸ್ಟಾಕ್ ಹೋಂ : 2022ನೇ ಸಾಲಿನ ಭೌತಶಾಸ್ತ್ರದ ನೊಬೆಲ್ ಪ್ರಶಸ್ತಿ ಘೋಷಣೆಯಾಗಿದ್ದು, ಭೌತ ವಿಜ್ಞಾನಿಗಳಾದ ಅಲೈನ್ ಆಸ್ಪೆಕ್ಟ್, ಜಾನ್ ಕ್ಲೌಸರ್ ಮತ್ತು ಆಂಟನ್ ಝೈಲಿಂಗರ್ ಅವರಿಗೆ ನೊಬೆಲ್ ಪ್ರಶಸ್ತಿ ನೀಡಲಾಗಿದೆ.
ರಾಯಲ್ ಸ್ವೀಡಿಷ್ ಅಕಾಡೆಮಿ ಆಫ್ ಸೈನ್ಸಸ್ ನ ಪ್ರಧಾನ ಕಾರ್ಯದರ್ಶಿ ಹ್ಯಾನ್ಸ್ ಎಲೆಗ್ರೆನ್ ಅವರು ಇಂದು ಸ್ಟಾಕ್ ಹೋಮ್ ನ ಕರೋಲಿನ್ಸ್ಕಾ ಇನ್ ಸ್ಟಿಟ್ಯೂಟ್ ನಲ್ಲಿ ವಿಜೇತರನ್ನು ಘೋಷಿಸಿದರು. ಸಂಯೋಜಿತ ಫೋಟಾನ್ ಗಳ ಪ್ರಯೋಗಗಳಿಗಾಗಿ ಹಾಗೂ ಕ್ವಾಂಟಮ್ ಮಾಹಿತಿ ವಿಜ್ಞಾನದ ವಿಷಯದಲ್ಲಿನ ಸಂಶೋಧನೆಗಾಗಿ ಅಲೈನ್ ಆಸ್ಪೆಕ್ಟ್, ಜಾನ್ ಕ್ಲೌಸರ್ ಮತ್ತು ಆಂಟನ್ ಝೈಲಿಂಗರ್ ಅವರಿಗೆ ನೊಬೆಲ್ ಪ್ರಶಸ್ತಿ ನೀಡಲಾಗಿದೆ.
ಮೂವರೂ ಸಂಶೋಧಕರು, ಎರಡು ಕಣಗಳು ಬಹಳಷ್ಟು ದೂರದಲ್ಲಿ ಇದ್ದಾಗಲೂ ಒಂದೇ ಘಟಕವಾಗಿ ವರ್ತಿಸುವುದನ್ನು ಎಂಟ್ಯಾಂಗಲ್ಡ್ ಕ್ವಾಂಟಮ್ ಸ್ಟೇಟ್ ಪ್ರಯೋಗಗಳಿಂದ ಖಚಿತಪಡಿಸಿದ್ದಾರೆ. ಅವರು ನಡೆಸಿರುವ ಪ್ರಯೋಗಗಳ ಫಲಿತಾಂಶಗಳ ಫಲವಾಗಿ ಕ್ವಾಂಟಮ್ ಮಾಹಿತಿಯನ್ನು ಆಧರಿಸಿದ ಹೊಸ ತಂತ್ರಜ್ಞಾನದ ಬೆಳವಣಿಗೆಗೆ ದಾರಿಯಾಗಿದೆ.
ಬಹುಮಾನವು 10 ಮಿಲಿಯನ್ ಸ್ವೀಡಿಷ್ ಕ್ರೋನರ್ (ಸುಮಾರು $900,000) ನಗದು ಪ್ರಶಸ್ತಿಯನ್ನು ಹೊಂದಿದೆ ಮತ್ತು ಡಿಸೆಂಬರ್ 10 ರಂದು ಹಸ್ತಾಂತರಿಸಲಾಗುವುದು.










