ಚಂದ್ರಶೇಖರ ಗುರೂಜಿ ಹತ್ಯೆ ಕೇಸ್ : ನ್ಯಾಯಾಲಯಕ್ಕೆ 800 ಪುಟಗಳ ಚಾರ್ಜ್‍ಶೀಟ್ ಸಲ್ಲಿಕೆ…

58
firstsuddi

ಹುಬ್ಬಳ್ಳಿ : ಸರಳವಾಸ್ತು ಸಂಸ್ಥಾಪಕ ಹಾಗೂ ರಾಜ್ಯದ ಪ್ರಸಿದ್ಧ ವಾಸ್ತು ತಜ್ಞ ಚಂದ್ರಶೇಖರ ಗುರೂಜಿ ಅವರ ಹತ್ಯೆ ಇಡೀ ರಾಜ್ಯವನ್ನೇ ಬೆಚ್ಚಿ ಬೀಳಿಸಿತ್ತು. ಹತ್ಯೆಗೆ ಕಾರಣ ತಿಳಿಯಲು ಮುಖ್ಯ ತನಿಖಾಧಿಕಾರಿ ಎಸಿಪಿ ವಿನೋದ ಮುಕ್ತೇದಾರ ನೇತೃತ್ವದಲ್ಲಿ ಐದು ತನಿಖಾ ತಂಡ ರಚಿಸಲಾಗಿತ್ತು. ಇದೀಗ ಹತ್ಯೆಗೆ ಸಂಬಂಧಿಸಿದಂತೆ ಹಂತಕರಾದ ಮಹಾಂತೇಶ ಶಿರೂರ ಹಾಗೂ ಮಂಜುನಾಥ ಮರೇವಾಡ ವಿರುದ್ಧ ಪೊಲೀಸರು ಜೆಎಂಎಫ್ ಸಿ ಕೋರ್ಟ್ ನಲ್ಲಿ ಸುಮಾರು 800ಕ್ಕೂ ಹೆಚ್ಚು ಪುಟಗಳ ಚಾರ್ಜ್ ಶೀಟ್ ಸಲ್ಲಿಸಿದ್ದಾರೆ.

ಚಂದ್ರಶೇಖರ ಗುರೂಜಿ ಹತ್ಯೆಗೆ ಕಾರಣಗಳೇನು? : ಹಂತಕನ ಹೆಸರಿನಲ್ಲಿದ್ದ 10 ಕೋಟಿ ಬೇನಾಮಿ ಜಮೀನಿನ ವ್ಯಾಜ್ಯವೇ ಹತ್ಯೆಗೆ ಕಾರಣ ಎಂಬುದಾಗಿ ಉಲ್ಲೇಖಿಸಲಾಗಿದೆ. ಹುಬ್ಬಳ್ಳಿಯ ತಾರಿಹಾಳ ಕೈಗಾರಿಕಾ ಪ್ರದೇಶದಲ್ಲಿರುವ 10 ಕೋಟಿ ರೂಪಾಯಿ ಮೌಲ್ಯದ 4.5 ಎಕರೆ ಜಮೀನು ಇದೆ. ಇದನ್ನು ಬೇನಾಮಿಯಾಗಿ ಗುರೂಜಿ ಹಂತಕ ಮಹಾಂತೇಶ ಹೆಸರಿಗೆ ಮಾಡಿದ್ದರು. ಈ ಜಮೀನನ್ನು ಮಹಾಂತೇಶ ಗುರೂಜಿಗೆ ತಿಳಿಯದಂತೆ ಮಾರಿದ್ದ. ಈ ವಿಚಾರವಾಗಿ ಗುರೂಜಿ, ಮಹಾಂತೇಶ ಕೋರ್ಟ್ ಮೆಟ್ಟಿಲೇರಿದ್ದರು. ರೆವಿನ್ಯೂ ಕೋರ್ಟ್ ನಲ್ಲಿ ಕೇಸ್ ಮಹಾಂತೇಶ್ ಪರವಾಗಿತ್ತು. ಈ ತೀರ್ಪು ಪ್ರಶ್ನಿಸಿ ಗುರೂಜಿ ಸಿವಿಲ್ ಕೋರ್ಟ್ ಗೆ ಹೋಗಿದ್ದರು. ಈ ವಿಚಾರ ಮಹಾಂತೇಶ್ ಮತ್ತು ಗುರೂಜಿ ನಡುವೆ ಕಲಹಕ್ಕೆ ಕಾರಣವಾಗಿತ್ತು.

ಅಲ್ಲದೆ ಹಂತಕರು ಸರಳವಾಸ್ತು ಸಂಸ್ಥೆಗೆ ವಿರುದ್ಧವಾಗಿ ಮತ್ತೊಂದು ಸಂಸ್ಥೆ ಕಟ್ಟಿದ್ರು. ಕೋಪಗೊಂಡಿದ್ದ ಗುರೂಜಿ ಇವರಿಗೆ ಹಿನ್ನಡೆ ಆಗುವಂತೆ ಮಾಡಿದ್ರು. ಇದಕ್ಕೆ ಹಂತಕರು ಗುರೂಜಿ ಅಪಾರ್ಟ್ ಮೆಂಟ್ ನಲ್ಲಿ ಕಾನೂನುಗಳು ಉಲ್ಲಂಘನೆಯಾಗುತ್ತಿವೆ ಅಂತ ಗ್ರಾಹಕರ ನ್ಯಾಯಾಲಯಕ್ಕೆ ದೂರು ನೀಡಿದ್ದರು. ಈ ದೂರನ್ನು ಹಿಂಪಡೆಯುವಂತೆ ಗುರೂಜಿ ಹಂತಕರಿಗೆ ಒತ್ತಡ, ಮಾನಸಿಕ ಕಿರಿಕಿರಿ ನೀಡಿದ್ದರು ಎಂದು ಚಾರ್ಜ್ ಶೀಟ್ ನಲ್ಲಿ ಪೊಲೀಸರು ಉಲ್ಲೇಖಿಸಿದ್ದಾರೆ.

ಗುರೂಜಿ ಅವರನ್ನು ಹಂತಕರಿಬ್ಬರು ಜು.5ರಂದು ಹುಬ್ಬಳ್ಳಿಯ ಖಾಸಗಿ ಹೋಟೆಲ್ ನಲ್ಲಿ ಚಾಕುವಿನಿಂದ ಇರಿದು ಹತ್ಯೆಗೈದು ಪರಾರಿಯಾಗಿದ್ದರು. ಘಟನೆ ನಡೆದ 4 ಗಂಟೆಯೊಳಗೆ ಹಂತಕರನ್ನು ರಾಮದುರ್ಗ ಬಳಿ ಸಿನಿಮೀಯ ರೀತಿಯಲ್ಲಿ ಅಡ್ಡಗಟ್ಟಿ ಪೊಲೀಸರು ವಶಕ್ಕೆ ಪಡೆದಿದ್ದರು.