ಮುಂಬೈ: ಅಲ್ಪಸಂಖ್ಯಾತರನ್ನು ಅಪಾಯಕ್ಕೆ ಸಿಲುಕಿಸುವುದು ಸಂಘ ಅಥವಾ ಹಿಂದೂಗಳ ಸ್ವಭಾವವಲ್ಲ. ಆರ್‌ಎಸ್‌ಎಸ್ ಸಹೋದರತ್ವದ ಪರವಾಗಿ ನಿಲ್ಲಲು ನಿರ್ಧರಿಸುತ್ತದೆ ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ ಮುಖ್ಯಸ್ಥ ಮೋಹನ್ ಭಾಗವತ್ ಅವರು ಹೇಳಿದ್ದಾರೆ.
ಪುಸ್ತಕ ಬಿಡುಗಡೆ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, ನಮ್ಮಿಂದಾಗಲಿ ಅಥವಾ ಹಿಂದೂಗಳಿಂದಾಗಲಿ ಅಪಾಯವಿದೆ ಎಂದು ಅಲ್ಪಸಂಖ್ಯಾತರಲ್ಲಿ ಭಯ ಹುಟ್ಟಿಸಲಾಗುತ್ತಿದೆ. ಇದು ಹಿಂದೆಯೂ ಆಗಿಲ್ಲ, ಮುಂದೆಯೂ ಆಗುವುದಿಲ್ಲ. ನಾವು ಭ್ರಾತೃತ್ವವನ್ನು ಬಯಸುತ್ತೇವೆ. ಯಾವುದೇ ಬೆದರಿಕೆಗೆ ಹಿಂದು ಸಮಾಜ ಬಗ್ಗುವುದಿಲ್ಲ. ಹಿಂದು ಸಮಾಜ ಇಂದಿನ ಕಾಲದ ಅಗತ್ಯವಾಗಿದೆ. ಸಹೋದರತ್ವ, ಸೌಹಾರ್ದತೆ ಮತ್ತು ಶಾಂತಿಯ ಪರವಾಗಿ ನಿಲ್ಲಲು ಸಂಘ ಸಂಕಲ್ಪ ಮಾಡುತ್ತದೆ ಎಂದು ಹೇಳಿದರು.
ಸಮಾಜದ ಹಿತದೃಷ್ಟಿಯಿಂದ ಯೋಚಿಸುವ ಪ್ರತಿಯೊಬ್ಬರೂ ‘ವರ್ಣ’ ಮತ್ತು ‘ಜಾತಿ’ ವ್ಯವಸ್ಥೆಯು ಹಳೇ ವಿಷಯ ಎಂದು ಹೇಳಬೇಕು. ಎಲ್ಲರೂ ಅದನ್ನು ಮರೆಯಬೇಕು ಎಂದು ತಿಳಿಸಿದ್ದಾರೆ.










