ಚಿಕ್ಕಮಗಳೂರು : ದೇಶದ ಸಂವಿಧಾನವನ್ನು ಮನುವಾದಿಗಳಿಂದ ರಕ್ಷಿಸುವ ನಿಟ್ಟಿನಲ್ಲಿ ಬಹುಜನ ಸಮಾಜ ಪಕ್ಷ ರಾಜ್ಯಾದ್ಯಂತ ಸಂವಿಧಾನ ಸಂರಕ್ಷಣಾ ಅಭಿಯಾನವನ್ನು ಹಮ್ಮಿಕೊಂಡಿದೆ ಎಂದು ಪಕ್ಷದ ರಾಜ್ಯ ಪ್ರಧಾನ ಕಾರ್ಯದರ್ಶಿ ಜಾಕೀರ್ ಹುಸೇನ್ ಹೇಳಿದರು.
ನಗರದ ಅಂಬೇಡ್ಕರ್ ಭವನದಲ್ಲಿ ಇಂದು ನಡೆದ ಬಹುಜನ ಸಮಾಜ ಪಕ್ಷದ ಬೂತ್ ಮಟ್ಟದ ಕಾರ್ಯಕರ್ತರ ಕಾರ್ಯಾಗಾರವನ್ನು ಉದ್ಟಾಟಿಸಿ ಅವರು ಮಾತನಾಡಿದರು.
ಅಭಿಯಾನದ ಅಂಗವಾಗಿ ರಾಜ್ಯದ ನೂರು ವಿಧಾನಸಭಾ ಕ್ಷೇತ್ರಗಳು ಮತ್ತು ಎಲ್ಲಾ ಜಿಲ್ಲೆಗಳಲ್ಲಿ ಬೈಕ್ ಜಾಥಾ ಸೇರಿದಂತೆ ಸಂವಿಧಾನ ಉಳಿಸುವ ಕುರಿತು ಜಾಗೃತಿ ಕಾರ್ಯಕ್ರಮಗಳು ನಡೆಯಲಿವೆ ಎಂದರು.
ಅ.31 ರಂದು ಶೃಂಗೇರಿ, ನ.1 ರಂದು ಚಿಕ್ಕಮಗಳೂರು ಮತ್ತು 5 ರಂದು ಮೂಡಿಗೆರೆಯಲ್ಲಿ ಅಭಿಯಾನ ಜರುಗಲಿವೆ ಎಂದ ಅವರು ಬಹುಜನ ಸಮಾಜ ಪಕ್ಷದ ಸತತ ಹೋರಾಟದಿಂದಾಗಿ ದೇಶದಲ್ಲಿಂದು ಸಂವಿಧಾನ ಉಳಿದಿದೆ ಎಂದು ತಿಳಿಸಿದರು.
ಬಾಬಾ ಸಾಹೇಬ್ ಅಂಬೇಡ್ಕರ್ ಅವರು ತಮ್ಮ ಸರ್ವಸ್ವವನ್ನೂ ತ್ಯಾಗ ಮಾಡಿ ಸತತ 10 ವರ್ಷಗಳ ಕಾಲ ಶ್ರಮಪಟ್ಟು ದೇಶದ ಸಂವಿಧಾನವನ್ನು ರಚಿಸಿದ್ದಾರೆ, ಕೆಳವರ್ಗಗಳು ಮತ್ತು ಬಹುಜನರಿಗೆ ಹಕ್ಕುಗಳನ್ನು ನೀಡುವ, ಮೀಸಲಾತಿ ಸೇರಿದಂತೆ ಸವಲತ್ತುಗಳನ್ನು ಒದಗಿಸುವ ಅವರು ಗೌರವದಿಂದ ಬದುಕುವಂತೆ ಮಾಡುವ ಅಂಬೇಡ್ಕರ್ ಅವರ ಕನಸು ಸಂವಿಧಾನದಲ್ಲಿ ಅಡಗಿದೆ ಎಂದರು.
ಇತ್ತೀಚಿನ ವರ್ಷಗಳಲ್ಲಿ ಮನುವಾದಿಗಳು ಸಂವಿಧಾನವನ್ನು ತಮಗೆ ಬೇಕಾದಂತೆ ತಿರುಚುತ್ತಿದ್ದಾರೆ ಎಂದು ಆರೋಪಿಸಿದ ಅವರು ಸಂವಿಧಾನವನ್ನು ನಾವು ಸಂರಕ್ಷಿಸದಿದ್ದಲ್ಲಿ ಬಹುಜನರ ಮುಂದಿನ ಪೀಳಿಗೆಗೆ ಉಳಿಗಾಲವಿಲ್ಲ ಎಂದು ಎಚ್ಚರಿಸಿದರು.
ದೇಶದ ಹಳ್ಳಿ ಹಳ್ಳಿಗಳಲ್ಲಿ ದಲಿತರ ಮೇಲಿನ ದೌರ್ಜನ್ಯ, ಶೋಷಣೆ, ಹತ್ಯೆ ನಿರಂತರವಾಗಿದೆ, ಸಂವಿಧಾನ ಮೂರಾಬಟ್ಟೆಯಾಗುತ್ತಿದೆ ಇದಕ್ಕೆ ಮೂಲ ಕಾರಣ ಕೆಳವರ್ಗದ ಜನ ಆಮಿಷಗಳಿಗೆ ಬಲಿಯಾಗಿ ಮತ ಚಲಾಯಿಸುತ್ತಿರುವುದು ಎಂದರು.
ಬಾಬಾ ಸಾಹೇಬರ ಋಣವನ್ನು ತೀರಿಸಬೇಕಾದರೆ ನಾವು ಬಹುಜನ ಚಳುವಳಿಯನ್ನು ಬೆಳೆಸಬೇಕು, ಸಂವಿಧಾನದ ಉಳಿವಿಗೆ ಹೋರಾಟ ನಡೆಸಬೇಕು ಎಂದು ಕರೆ ನೀಡಿದರು.
ಬಿಎಸ್‍ಪಿ ರಾಜ್ಯ ಕಾರ್ಯದರ್ಶಿ ಕೆ.ಬಿ.ಸುಧಾ ಮಾತನಾಡಿ ಅಂಬೇಡ್ಕರ್ ಅವರ ಸಂವಿಧಾನದಿಂದಾಗಿ ಕೆಳವರ್ಗದ ಜನ ಮತ್ತು ಮಹಿಳೆಯರು ಗೌರವದಿಂದ ಬದುಕಲು ಸಾಧ್ಯವಾಗಿದೆ ಎಂದು ಹೇಳಿದರು.
ಬಿಎಸ್‍ಪಿ ಜಿಲ್ಲಾಧ್ಯಕ್ಷ ಕೆ.ಟಿ.ರಾಧಾಕೃಷ್ಣ ಮಾತನಾಡಿ ಬಹುಜನ ಚಳುವಳಿಯನ್ನು ಬೆಳೆಸುವ ನಿಟ್ಟಿನಲ್ಲಿ ಇಂದಿನ ಕಾರ್ಯಾಗಾರ ಅತ್ಯಂತ ಮಹತ್ವದ್ದಾಗಿದೆ, ಕಾರ್ಯಕರ್ತರು ಇಲ್ಲಿ ಹೇಳುವ ವಿಚಾರಗಳನ್ನು ಸರಿಯಾಗಿ ಮನದಟ್ಟು ಮಾಡಿಕೊಳ್ಳಬೇಕು, ಬಹುಜನ ಚಳುವಳಿಯ ರೂವಾರಿಗಳಾಗಬೇಕು ಎಂದು ಸಲಹೆ ಮಾಡಿದರು.
ರಾಜ್ಯ ಕಾರ್ಯದರ್ಶಿಯಾಗಿ ನೇಮಕವಾದ ಹಿನ್ನೆಲೆಯಲ್ಲಿ ಕೆ.ಬಿ.ಸುಧಾ ಅವರನ್ನು ಸಮಾರಂಭದಲ್ಲಿ ಸನ್ಮಾನಿಸಲಾಯಿತು, ಬಿಎಸ್‍ಪಿ ತಾಲ್ಲೂಕು ಅಧ್ಯಕ್ಷ ಹರೀಶ್ ಮಿತ್ರ ಅಧ್ಯಕ್ಷತೆ ವಹಿಸಿದ್ದರು.
ಬಿಎಸ್‍ಪಿ ರಾಜ್ಯ ಕಾರ್ಯದರ್ಶಿ ಪಿ.ಪರಮೇಶ್, ಜಿಲ್ಲಾ ಉಪಾಧ್ಯಕ್ಷರಾದ ಕೆ.ಆರ್.ಗಂಗಾಧರ್, ಬಿ.ಎಂ.ಶಂಕರ್, ತಾಲ್ಲೂಕು ಉಪಾಧ್ಯಕ್ಷೆ ರೇಖಾ, ನಗರ ಕಾರ್ಯದರ್ಶಿ ವಿನೀತ್, ತಾಲ್ಲೂಕು ಸಂಯೋಜಕಿ ಕೆ.ಎಸ್.ಮಂಜುಳ, ಪಿ.ವಿ.ತಂಬನ್, ಪಿ.ಕೆ.ಮಂಜುನಾಥ್, ಲೋಕವಳ್ಳಿ ರಮೇಶ್, ವಸಂತ್, ನವೀನ್ ಉಪಸ್ಥಿತರಿದ್ದರು.










