ನವದೆಹಲಿ: ನೀವು ನಿಮ್ಮ ಆಧಾರ್ ಅನ್ನು 10 ವರ್ಷಗಳ ಹಿಂದೆ ಪಡೆದಿದ್ದು, ಬಳಿಕ ಅದನ್ನು ನವೀಕರಿಸಿಲ್ಲವಾ? ಹಾಗಿದ್ದರೆ ನೀವು ಈ ಕೂಡಲೇ ನಿಮ್ಮ ಮಾಹಿತಿಗಳನ್ನು ನವೀಕರಿಸುವಂತೆ ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರ (ಯುಐಡಿಎಐ) ಕೋರಿದೆ.
10 ವರ್ಷಗಳ ಹಿಂದೆ ಆಧಾರ್ ಸಂಖ್ಯೆ ಪಡೆದಿರುವ ಮತ್ತು ಅಂದಿನಿಂದ ಈವರೆಗೂ ಒಮ್ಮೆಯೂ ನವೀಕರಿಸದವರು ಕೊಟ್ಟಿರುವ ಮಾಹಿತಿಯನ್ನು ಪುನಃ ದೃಢೀಕರಿಸಿ ನವೀಕರಿಸಬೇಕು. ಆಧಾರ್ ಡೇಟಾದಲ್ಲಿ ವೈಯಕ್ತಿಕ ಗುರುತಿನ ಪುರಾವೆ ಮತ್ತು ವಿಳಾಸ ಪುರಾವೆಗೆ ಸಂಬಂಧಿಸಿದ ದಾಖಲೆಗಳನ್ನು ನವೀಕರಿಸಿ ಎಂದು ಯುಐಡಿಎಐ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ. ಆದಾಗ್ಯೂ, ಈ ನವೀಕರಣವು ಕಡ್ಡಾಯವಾಗಿದೆಯೇ ಅಥವಾ ಇಲ್ಲವೋ ಎಂಬುದರ ಬಗ್ಗೆ ಯುಐಡಿಎಐ ಇನ್ನೂ ಸ್ಪಷ್ಟೀಕರಣ ನೀಡಿಲ್ಲ.
myaadhaar.uidai.gov.in ಲಿಂಕ್ ಅನ್ನು ಕ್ಲಿಕ್ ಮಾಡುವ ಮೂಲಕ ಆನ್ ಲೈನ್ ನಲ್ಲಿ ಅಥವಾ ನಿಮ್ಮ ಸಮೀಪದ ಆಧಾರ್ ಕೇಂದ್ರಕ್ಕೆ ಭೇಟಿ ನೀಡುವ ಮೂಲಕ ಆಫ್ ಲೈನ್ ನಲ್ಲಿಯೂ ನಿಮ್ಮ ವಿವರಗಳನ್ನು ಅಪ್ಡೇಟ್ ಮಾಡಬಹುದು ಎಂದು ತಿಳಿಸಿದೆ.










