ಬೆಂಗಳೂರು : ಹಿಜಾಬ್ ವಿವಾದದ ವಿಚಾರಣೆ ಮುಖ್ಯ ನ್ಯಾಯಮೂರ್ತಿಗಳ ಪೀಠಕ್ಕೆ ವರ್ಗಾವಣೆ ಆಗಿರುವುದನ್ನು ಸ್ವಾಗತಿಸುತ್ತೇವೆ. ಮುಂದಿನ ತೀರ್ಪಿಗೆ ಸರ್ಕಾರ ಕಾಯುತ್ತೆ. ಅಲ್ಲಿಯವರೆಗೂ ಹೈಕೋರ್ಟ್ ಆದೇಶವನ್ನು ಶಿಕ್ಷಣ ಸಂಸ್ಥೆಗಳಲ್ಲಿ ಪಾಲಿಸುತ್ತೇವೆ ಎಂದು ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಅವರು ತಿಳಿಸಿದರು.
ನಗರದಲ್ಲಿಂದು ಸುಪ್ರೀಂಕೋರ್ಟ್ ತೀರ್ಪಿನ ಬಗ್ಗೆ ಮಾಧ್ಯಮದವರೊಂದಿಗೆ ಪ್ರತಿಕ್ರಿಯಿಸಿದ ಅವರು, ವಿಶ್ವಾದ್ಯಂತ ಮಹಿಳೆಯರು ಹಿಜಾಬ್/ಬುರ್ಖಾ ಧರಿಸಬಾರದು ಎಂದು ಒತ್ತಾಯಿಸುತ್ತಿಸುತ್ತಿದ್ದಾರೆ. ಕರ್ನಾಟಕ ಸರ್ಕಾರ ಕೂಡ ಅದನ್ನು ಪ್ರೋತ್ಸಾಹಿಸುತ್ತದೆ. ಇಂದು ಸುಪ್ರೀಂ ಕೋರ್ಟ್ ನಿಂದ ಉತ್ತಮ ತೀರ್ಪು ನಿರೀಕ್ಷಿಸಿದ್ದೆವು. ಆದರೆ ವಿಭಜಿತ ತೀರ್ಪು ಬಂದಿದೆ. ಕರ್ನಾಟಕದಲ್ಲಿ ಹಿಜಾಬ್ ನಿಷೇಧ ಮುಂದುವರಿಯುತ್ತದೆ. ಶಿಕ್ಷಣ ಸಂಸ್ಥೆಗಳ ಆವರಣದಲ್ಲಿ ಧಾರ್ಮಿಕ ಆಚರಣೆ, ಚಿಹ್ನೆಗಳ ಪ್ರದರ್ಶನ ಸಲ್ಲದು ಎಂದು ಸರ್ಕಾರದ ನಿಲುವು ಪುನರುಚ್ಚರಿಸಿದರು.
ಇನ್ನು ಗೃಹ ಸಚಿವ ಆರಗ ಜ್ಞಾನೇಂದ್ರ ಪ್ರತಿಕ್ರಿಯಿಸಿದ್ದು, ಹಿಜಾಬ್ ಸಂಬಂಧ ಇಬ್ಬರು ಜಡ್ಜ್ ಗಳು ವಿಭಿನ್ನ ತೀರ್ಪು ನೀಡಿದ್ದಾರೆ. ಇದೀಗ ಸಿಜೆಐ ಪೀಠಕ್ಕೆ ಪ್ರಕರಣ ವರ್ಗಾವಣೆ ಆಗಿದೆ. ಸಿಜೆಐ ಪೀಠ ನೀಡುವ ತೀರ್ಪಿಗೆ ಸರ್ಕಾರ ಬದ್ಧವಾಗಿರುತ್ತೆ ಎಂದರು.
ಹಿಜಾಬ್ ವಿವಾದ ಸಿಜೆಐ ಅವರಿಗೆ ವರ್ಗಾವಣೆ ಆಗಿದೆ. ಸಿಜೆಐ ಏನು ನಿರ್ಧಾರ ಕೈಗೊಳ್ಳುತ್ತಾರೆ ಅನ್ನೋದರ ಮೇಲೆ ನಿರ್ಧಾರ ಆಗಲಿದೆ ಎಂದರು. ಕರ್ನಾಟಕ ಸರ್ಕಾರ ಸುಪ್ರೀಂ ತೀರ್ಪು ಎದುರು ನೋಡುತ್ತಿದ್ದೇವೆ ಎಂದ ಅವರು, ತೀರ್ಪು ಹಿನ್ನಲೆಯಲ್ಲಿ ಭದ್ರತೆ ಕೂಡ ಎಲ್ಲಾ ರೀತಿಯಲ್ಲಿ ಮಾಡಲಾಗಿದೆ. ಸೂಕ್ಷ್ಮ ಪ್ರದೇಶದಲ್ಲಿ ಬಂದೋಬಸ್ತ್ ಮಾಡಲಾಗಿದೆ ಎಂದು ತಿಳಿಸಿದರು.










