ನವದೆಹಲಿ : ಜಮ್ಮು ಮತ್ತು ಕಾಶ್ಮೀರದಲ್ಲಿ ಭಯೋತ್ಪಾದಕರ ಮೇಲಿನ ಎನ್ ಕೌಂಟರ್ ನಲ್ಲಿ ಗಾಯಗೊಂಡು ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದ ಸೇನೆಯ ಶ್ವಾನ ಝೂಮ್ ಇಂದು ಮೃತಪಟ್ಟಿದೆ ಎಂದು ಸೇನಾ ಅಧಿಕಾರಿಗಳು ತಿಳಿಸಿದ್ದಾರೆ.
ಅನಂತನಾಗ್ ನ ಕೋಕರ್ ನಾಗ್ ನಲ್ಲಿ ನಡೆದ ಯುದ್ಧ ಕಾರ್ಯಾಚರಣೆಯಲ್ಲಿ ಝೂಮ್ ಭಯೋತ್ಪಾದಕರ ಮೇಲೆ ದಾಳಿ ಮಾಡಿತ್ತು. ಈ ವೇಳೆ ಎರಡು ಗುಂಡು ತಗುಲಿ ಗಂಭೀರ ಗಾಯಗೊಂಡಿತ್ತು. ನಂತರ ಶ್ವಾನ ಝೂಮ್ ನನ್ನು ಅಡ್ವಾನ್ಸ್ ಫೀಲ್ಡ್ ವೆಟರ್ನರಿ ಹಾಸ್ಪಿಟಲ್ (54 AFVH)ಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿತ್ತು. ಆದರೆ, ಇಂದು ಮಧ್ಯಾಹ್ನ 12 ಗಂಟೆಯ ಸುಮಾರಿಗೆ ಅದು ಕೊನೆಯುಸಿರೆಳೆದಿದೆ.
ಗುಂಡೇಟು ಬಿದ್ದರೂ ಝೂಮ್ ಶ್ವಾನ ಉಗ್ರರ ಮೇಲೆ ದಾಳಿ ಮುಂದುವರಿಸಿತ್ತು. ಭಯೋತ್ಪಾದಕರನ್ನು ನಿಗ್ರಹಿಸುವಲ್ಲಿಯೂ ಯಶಸ್ವಿಯಾಗಿತ್ತು. ಎನ್ ಕೌಂಟರ್ ನಲ್ಲಿ ಝೂಮ್ ಜೊತೆಗೆ ಇಬ್ಬರು ಸೈನಿಕರೂ ಗಾಯಗೊಂಡಿದ್ದರು. ನಂತರ ಭದ್ರತಾ ಪಡೆಗಳು ನಡೆಸಿದ ಎನ್ ಕೌಂಟರ್ ನಲ್ಲಿ ಇಬ್ಬರು ಲಷ್ಕರ್-ಎ-ತೊಯ್ಬಾ ಭಯೋತ್ಪಾದಕರು ಹತರಾಗಿದ್ದಾರೆ.










