ಅಕ್ರಮ ಹಣ ವರ್ಗಾವಣೆ : ಪತ್ರಕರ್ತೆ ರಾಣಾ ಅಯ್ಯೂಬ್‌ ವಿರುದ್ಧ ಚಾರ್ಜ್‌ಶೀಟ್‌ ಸಲ್ಲಿಸಿದ ಇಡಿ.

37
firstsuddi

ನವದೆಹಲಿ : ಕೋವಿಡ್ -19 ಪರಿಹಾರ ಸೇರಿದಂತೆ, ಸಾಮಾಜಿಕ ಕಲ್ಯಾಣ ಕಾರ್ಯಕ್ರಮಗಳಿಗಾಗಿ ಸಾರ್ವಜನಿಕರಿಂದ ಸಂಗ್ರಹಿಸಿದ ಹಣವನ್ನು ದುರ್ಬಳಕೆ ಮಾಡಿದ್ದಾರೆ ಎಂದು ಜಾರಿ ನಿರ್ದೇಶನಾಲಯ(ಇಡಿ) ಪತ್ರಕರ್ತೆ ರಾಣಾ ಅಯ್ಯೂಬ್ ವಿರುದ್ಧ ಚಾರ್ಜ್ ಶೀಟ್ ಸಲ್ಲಿಸಿದೆ.

ಭಾರತೀಯ ದಂಡ ಸಂಹಿತೆ, ಮಾಹಿತಿ ತಂತ್ರಜ್ಞಾನ ಕಾಯ್ದೆ ಮತ್ತು ಕಪ್ಪುಹಣ ಕಾಯ್ದೆಯ ವಿವಿಧ ಸೆಕ್ಷನ್ ಅಡಿ ಕೇಸ್ ದಾಖಲಿಸಿ ತನಿಖೆ ನಡೆಸಿದ ಇಡಿ ಇಂದು ಉತ್ತರಪ್ರದೇಶದ ಗಾಜೀಯಾಬಾದ್ ನಲ್ಲಿರುವ ಪಿಎಂಎಲ್ ಎ ವಿಶೇಷ ನ್ಯಾಯಾಲಯಕ್ಕೆ ಚಾರ್ಜ್ ಶೀಟ್ ಸಲ್ಲಿಸಿತು.

ಕೋವಿಡ್-19ರ ಮೊದಲ ಲಾಕ್ ಡೌನ್ ಆರಂಭವಾದ ಒಂದು ತಿಂಗಳ ನಂತರ, 2020ರ ಏಪ್ರಿಲ್ ನಲ್ಲಿ ಕ್ರೌಡ್‌ಫಂಡಿಂಗ್ ವೆಬ್‌ಸೈಟ್ ಕೆಟ್ಟೋ (Ketto)ದಲ್ಲಿ ಮೂರು ಅಭಿಯಾನಗಳನ್ನು ನಡೆಸಿದ್ದ ಅಯ್ಯೂಬ್‌, ಅಂದಾಜು 2.69 ಕೋಟಿ ರೂ ಸಂಗ್ರಹಿಸಿದ್ದರು. ಅಯ್ಯೂಬ್ ಅವರು ವಿದೇಶಿ ಕೊಡುಗೆ ನಿಯಂತ್ರಣ ಕಾಯ್ದೆಯ(FCRA) ಅಡಿಯಲ್ಲಿ ನೋಂದಣಿ ಮಾಡದೇ ವಿದೇಶದಿಂದ ದೇಣಿಗೆ ಪಡೆದಿದ್ದಾರೆ ಎಂದು ಇಡಿ ಹೇಳಿದೆ.

ಈ ದೇಣಿಗೆಗಳನ್ನು ರಾಣಾ ಅಯ್ಯೂಬ್‌ ಅವರ ತಂದೆ ಮತ್ತು ಸಹೋದರಿಯ ಬ್ಯಾಂಕ್ ಖಾತೆಗಳಿಗೆ ಮೊದಲು ಜಮೆಯಾಗಿದ್ದು, ಬಳಿಕ ಅವರ ವೈಯಕ್ತಿಕ ಖಾತೆಗಳಿಗೆ ವರ್ಗಾವಣೆಯಾಗಿದೆ. ಅವರು 50 ಲಕ್ಷ ರೂಪಾಯಿಯ ನಿಶ್ಚಿತ ಠೇವಣಿ ಖಾತೆ ತೆರೆದಿದ್ದು, 50 ಲಕ್ಷ ರೂ ಹಣವನ್ನು ಹೊಸ ಖಾತೆಗೆ ವರ್ಗಾಯಿಸಿದ್ದರು. ಒಟ್ಟು ಸಂಗ್ರಹವಾದ 2,69,44,680 ರೂ. ಹಣದಲ್ಲಿ ಕೇವಲ 29 ಲಕ್ಷ ರೂ. ಮಾತ್ರ ಪರಿಹಾರ ನಿಧಿಗೆ ಬಳಕೆಯಾಗಿದ್ದು ಉಳಿದ ಹಣ ಬಳಕೆಯಾಗಿಲ್ಲ ಎಂದು ಇಡಿ ಚಾರ್ಜ್ ಶೀಟ್ ನಲ್ಲಿ ಉಲ್ಲೇಖಿಸಿದೆ.

ಕೊಳೆಗೇರಿ ನಿವಾಸಿಗಳು ಮತ್ತು ರೈತರಿಗೆ ಸಹಾಯ ಮಾಡಲು, ಅಸ್ಸಾಂ, ಬಿಹಾರ ಹಾಗೂ ಮಹಾರಾಷ್ಟ್ರದಲ್ಲಿ ಪರಿಹಾರ ಕಾರ್ಯಾಚರಣೆಗಳಿಗಾಗಿ ಮತ್ತು ಕೋವಿಡ್ ನಿಂದ ತೊಂದರೆಗೆ ಸಿಲುಕಿದ ಜನರಿಗೆ ನೆರವು ನೀಡಲು ಅವರು ಈ ಹಣ ಸಂಗ್ರಹಿಸಿದ್ದರು.