ಯತ್ನಾಳ್‍ಗೆ ನೋಟಿಸ್ ಜಾರಿ ಮಾಡಿ, ಪಕ್ಷದ ಹಿರಿಯ ನಾಯಕರ ವಿರುದ್ಧ ಮಾತನಾಡದಂತೆ ವಾರ್ನಿಂಗ್ ಕೊಟ್ಟಿದ್ದೇವೆ : ಅರುಣ್ ಸಿಂಗ್.

72
firstsuddi

ಬೆಳಗಾವಿ : ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರಿಗೆ ನೋಟಿಸ್ ಜಾರಿ ಮಾಡಿದ್ದೇವೆ. ಪಕ್ಷಕ್ಕೆ ಡ್ಯಾಮೇಜ್ ಮಾಡದಂತೆ ಹಾಗೂ ಪಕ್ಷದ ಹಿರಿಯ ನಾಯಕರ ವಿರುದ್ಧ ಮಾತನಾಡದಂತೆ ವಾರ್ನಿಂಗ್ ಕೊಟ್ಟಿದ್ದೇವೆ ಎಂದು ಬಿಜೆಪಿ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಅವರು ಹೇಳಿದರು.

ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಯತ್ನಾಳ್ ಅವರನ್ನು ಮಂತ್ರಿ ಮಾಡಿಲ್ಲ. ಅದಕ್ಕಾಗಿ ಹೀಗೆ ಮಾತನಾಡಿದ್ದಾರೆ. ಯಾರೇ ಆದ್ರು ಪಕ್ಷದ ಚೌಕಟ್ಟಿನಲ್ಲಿ ಮಾಡಬೇಕು. ಪಕ್ಷದ ಹಿರಿಯ ನಾಯಕರನ್ನು ಗೌರವಿಸಬೇಕು. ಯಾರು ತಮ್ಮ ಸ್ವಾರ್ಥವನ್ನು ಇಟ್ಟುಕೊಂಡು ಮಾತನಾಡಬಾರದು ಎಂದರು.

ಬಿಎಸ್‍ವೈ, ಸಿಎಂ ಬೊಮ್ಮಾಯಿ ಒಟ್ಟಾಗಿ ವಿಜಯಸಂಕಲ್ಪ ಯಾತ್ರೆ ಮಾಡಿದ್ರೆ ಬಿಜೆಪಿ ಸೋಲುತ್ತದೆ ಎಂದು ಯತ್ನಾಳ್ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಯತ್ನಾಳ್ ಅವರ ಹೇಳಿಕೆಯಿಂದ ಯಾವುದೇ ಪರಿಣಾಮ ಬೀರುವುದಿಲ್ಲ. ಯತ್ನಾಳ್ ಹೇಳಿಕೆಯನ್ನು ಪಕ್ಷದ ಕಾರ್ಯಕರ್ತರು ನಿರ್ಲಕ್ಷ್ಯ ಮಾಡುತ್ತಾರೆ. ಅವರು ನಮ್ಮ ಕೋರ್ ಕಮಿಟಿ ಸದಸ್ಯರೂ ಅಲ್ಲ. ಇಂತಹ ಯತ್ನಾಳ್ ಹೇಳಿಕೆ ಪಕ್ಷದ ಕಾರ್ಯಕರ್ತರಿಗೂ ಇಷ್ಟ ಆಗಲ್ಲ. ಯತ್ನಾಳ್ ಅವರು ಬಿಜೆಪಿಯಿಂದ ಗೆದ್ದಿದ್ದಾರೆ. ಈ ಹಿಂದೆ ಪಕ್ಷದಿಂದ ಹೊರಗೆ ಹೋಗಿದ್ರು. ಬಿಜೆಪಿ ಎಲ್ಲಾ ಸಮಾಜ, ಜನಾಂಗದ ಪರವಾಗಿ ಕೆಲಸ ಮಾಡುತ್ತಿದೆ. ಸಬ್ಕಾ ಸಾಥ್, ಸಬ್ಕಾ ವಿಕಾಸ್ ಅಂತಾ ಮೋದಿ ಸರ್ಕಾರ ಕೆಲಸ ಮಾಡುತ್ತಿದೆ ಎಂದು ತಿಳಿಸಿದರು.

ಪಂಚಮಸಾಲಿ ಮೀಸಲಾತಿ ಹೋರಾಟ ವಿಚಾರಕ್ಕೆ, ಎಸ್ ಸಿ, ಎಸ್ ಟಿ ಮೀಸಲಾತಿಯನ್ನು ಬೊಮ್ಮಾಯಿ ಸರ್ಕಾರ ಹೆಚ್ಚಳ ಮಾಡಿದೆ. ಎಸ್ ಸಿ, ಎಸ್ ಟಿ ಮೀಸಲಾತಿಗೆ ಬಿಜೆಪಿ ಬೆಂಬಲಿಸಿದೆ. ಕಾಂಗ್ರೆಸ್ ಎಂದಿಗೂ ಮೀಸಲಾತಿ ಹೆಚ್ಚಿಸುವ ಕೆಲಸವನ್ನು ಮಾಡಲಿಲ್ಲ. ಮುರುಗೇಶ್ ನಿರಾಣಿ, ಸಿ.ಸಿ.ಪಾಟೀಲ್, ಶಂಕರ್ ಗೌಡ ಪಾಟೀಲ್ ಮುನೇನಕೊಪ್ಪ ಅವರೇ ಪಂಚಮಸಾಲಿ ಸಚಿವರು ಇದ್ದಾರೆ. ಆದ್ರು ಪಂಚಮಸಾಲಿ ಸಮುದಾಯದ ಜನರ ಬೇಡಿಕೆ ಬಗ್ಗೆ ಕುಳಿತು ಸಮಾಲೋಚನೆ ಮಾಡಿದ್ದೇವೆ ಎಂದು ಹೇಳಿದರು.

ಯಡಿಯೂರಪ್ಪ ಅವರನ್ನ ನಿರ್ಲಕ್ಷ್ಯ ಮಾಡುತ್ತಿಲ್ಲ. ಅವರು ವಿಜಯ ಸಂಕಲ್ಪ ಯಾತ್ರೆಗೆ ಹೋಗುತ್ತಿದ್ದಾರೆ. ಯಡಿಯೂರಪ್ಪ ಅವರು ಕರ್ನಾಟಕದ ಬಹಳ ದೊಡ್ಡ ಮತ್ತು ಜನಪ್ರಿಯ ನಾಯಕರಾಗಿದ್ದಾರೆ. ರಾಜ್ಯಾದ್ಯಂತ ಪ್ರವಾಸ ಮಾಡಿ ಪ್ರಚಾರ ಮಾಡ್ತಿದ್ದಾರೆ. ಬಿಜೆಪಿ 150 ಸ್ಥಾನ ಪಡೆಯಲು ಶ್ರಮಿಸುತ್ತಿದ್ದಾರೆ. ಅವರು ಜನರ ಬಳಿ ಹೋಗುತ್ತಿರುವುದು ಬಿಜೆಪಿ ಗೆಲುವು ಸಾಧಿಸಲಿದೆ ಎಂದು ತಿಳಿಸಿದರು.