ಓದುವ ಅಭಿರುಚಿ ಮನುಷ್ಯನ ವ್ಯಕ್ತಿತ್ವವನ್ನು ರೂಪಿಸುತ್ತದೆ : ಡಾ|| ಬೆಳವಾಡಿ ಮಂಜುನಾಥ್.

138
firstsuddi

ಚಿಕ್ಕಮಗಳೂರು : ಓದುವ ಅಭಿರುಚಿ ಮನುಷ್ಯನ ವ್ಯಕ್ತಿತ್ವವನ್ನು ರೂಪಿಸುತ್ತದೆ ಎಂದು ಸಾಹಿತಿ ಡಾ|| ಬೆಳವಾಡಿ ಮಂಜುನಾಥ್ ಹೇಳಿದರು. ಕುಂಭಕ ಓದುಗ ಬಳಗ ತಾಲ್ಲೂಕಿನ ಕಂಚೇನಹಳ್ಳಿಯ ವಾಜುವಳ್ಳಿ ರಮೇಶ್ ಅವರ ಮನೆಯಂಗಳದಲ್ಲಿ ನಿನ್ನೆ ಏರ್ಪಡಿಸಿದ್ದ ಪುಸ್ತಕ ಓದು-ಸಂವಾದ-ಉಪನ್ಯಾಸ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಶಿಕ್ಷಕರು ಮತ್ತು ಪೋಷಕರು ಮಕ್ಕಳನ್ನು ಜ್ಞಾನ ಸಂಪಾದನೆಗಾಗಿ ಓದಿ ಎಂದು ಪ್ರೇರೇಪಿಸುವ ಬದಲು ಪರೀಕ್ಷೆಯಲ್ಲಿ ಅಂಕ ಗಳಿಕೆಗಾಗಿ ಹಾಗೂ ಉದ್ಯೋಗಕ್ಕಾಗಿ ಓದುವಂತೆ ತಯಾರು ಮಾಡುತ್ತಿರುವುದು ಮತ್ತು ಏನು ಬೇಕಾದರೂ ಗೂಗಲ್‍ನಲ್ಲಿ ಸಿಗುತ್ತದೆ ಎಂಬ ಧೋರಣೆಯಿಂದಾಗಿ ಸಮಾಜದಲ್ಲಿಂದು ಓದುವ ಸಂಸ್ಕೃತಿ ಕ್ಷೀಣಿಸಿದೆ ಎಂದು ವಿಷಾದಿಸಿದರು.

ಮಕ್ಕಳನ್ನು ಕೇವಲ ಅಂಕ ಗಳಿಸುವ ಯಂತ್ರಗಳನ್ನಾಗಿ ಮಾಡುವುದರಿಂದ ಅವರಲ್ಲಿ ಜ್ಞಾನ ಬೆಳೆಯುವುದಿಲ್ಲ, ಪುಸ್ತಕಗಳು ಮನುಷ್ಯನ ಉತ್ತಮ ಸ್ನೇಹಿತರಿದ್ದಂತೆ, ಓದುವ ಹವ್ಯಾಸವನ್ನು ಬೆಳೆಸಿಕೊಂಡರೆ ನಮ್ಮ ಜೀವನವೇ ಬದಲಾಗುತ್ತದೆ ಎಂದು ಕಿವಿಮಾತು ಹೇಳಿದರು.

ಮಾಧ್ಯಮಗಳಿಂದ ಓದುವ ಹವ್ಯಾಸ ಕ್ಷೀಣಿಸಿದೆ ಎನ್ನುವುದು ಸುಳ್ಳು, ಪತ್ರಿಕೆಗಳೂ ಸಹ ಮಾಧ್ಯಮವೇ ಆದರೆ ಅದನ್ನು ಎಷ್ಟು ಜನ ಓದುತ್ತಾರೆ ಎಂದು ಪ್ರಶ್ನಿಸಿದ ಅವರು ಓದಲು ಸಮಯವಿಲ್ಲ ಎನ್ನುವುದು ಸರಿಯಲ್ಲ, ಓದುವುದಕ್ಕೆ ನಾವು ಸಮಯವನ್ನು ಮಾಡಿಕೊಳ್ಳುವುದಿಲ್ಲ ಎಂದರು.
ಹಿರಿಯರು ದಿನದಲ್ಲಿ ಕನಿಷ್ಠ ಅರ್ಧ ಗಂಟೆಯಾದರೂ ಓದುವ ಕೆಲಸ ಮಾಡಬೇಕು ಆಗ ಮಕ್ಕಳೂ ಸಹ ಅದನ್ನು ಮಾಡುತ್ತಾರೆ ಎಂದು ಸಲಹೆ ನೀಡಿದರು.

ಪ್ರಾಧ್ಯಾಪಕ ಕೆ.ಎಂ.ಪ್ರದೀಪ್ ಹಬ್ಬಿದಾ ಮಲೆ ಮಧ್ಯದೊಳಗೆ ಕಥಾ ಸಂಕಲನದಲ್ಲಿರುವ ಹೊಸ ಬೆಳಕು, ಅನಾಥ ಮತ್ತು ಕಾಫಿ ತೋಟದ ನೆರಳು ಕೃತಿಗಳ ಕುರಿತು ಉಪನ್ಯಾಸ ನೀಡಿದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಕುಂಭಕ ಓದುಗ ಬಳಗದ ಸಂಚಾಲಕ ಕುಂದೂರು ಅಶೋಕ್ ಗ್ರಾಮೀಣ ಜನರಲ್ಲಿ ಓದುವ ಅಭಿರುಚಿಯನ್ನು ಬೆಳೆಸುವ ನಿಟ್ಟಿನಲ್ಲಿ ಓದುಗ ಬಳಗವನ್ನು ಸ್ಥಾಪಿಸಲಾಗಿದ್ದು, ಅದರಡಿ ಪ್ರತಿ ತಿಂಗಳೂ ಪುಸ್ತಕ ಓದು-ಸಂವಾದ-ಉಪನ್ಯಾಸ ಕಾರ್ಯಕ್ರಮ ನಡೆಸಲಾಗುವುದು ಎಂದು ತಿಳಿಸಿದರು.

ಅಧ್ಯಕ್ಷತೆ ವಹಿಸಿ ಮಾತನಾಡಿದ ವಾಜುವಳ್ಳಿ ರಮೇಶ್ ಓದುವುದರಿಂದ ಮಾತ್ರ ನಮ್ಮ ಜ್ಞಾನ ಬೆಳೆಯುತ್ತದೆ ಎಂದು ಹೇಳಿದರು. ಶಿಕ್ಷಕ ಟಿ.ಸೋಮಶೇಖರ್,ಚಂಚಲಾ ಅಶೋಕ್ ಉಪಸ್ಥಿತರಿದ್ದರು.