ಚಿಕ್ಕಮಗಳೂರು : ಬೆಳಕಿನ ಹಬ್ಬ ದೀಪಾವಳಿ ಅಂಗವಾಗಿ ನಗರದ ಇತಿಹಾಸ ಪ್ರಸಿದ್ದ ಶ್ರೀ ಬೋಳರಾಮೇಶ್ವರ ದೇವಾಲಯದಲ್ಲಿ ನಿನ್ನೆ ಗೋಮಾತೆಗೆ ವಿಶೇಷ ಪೂಜೆ ಸಲ್ಲಿಸಲಾಯಿತು.
ತಾಲ್ಲೂಕು ಆಡಳಿತದ ಪರವಾಗಿ ಕಂದಾಯ ನಿರೀಕ್ಷಕ ಸತ್ಯನಾರಾಯಣ ದಂಪತಿ ಸಂಜೆ ಗೋಧೂಳಿ ಲಗ್ನದಲ್ಲಿ ಗೋಪೂಜೆ ಸಲ್ಲಿಸುವುದರ ಜೊತೆಗೆ ಅಕ್ಕಿ, ಬೆಲ್ಲ, ಹಣ್ಣು ಮತ್ತು ಸಿಹಿ ಸೇರಿದಂತೆ ಗೋಗ್ರಾಸವನ್ನು ಗೋಮಾತೆಗೆ ಸಮರ್ಪಿಸಿದರು.
ತಾಲೂಕಿನ ಇಂದಾವರದ ಕಾಮಧೇನು ಗೋಶಾಲೆಯಿಂದ ಕರೆತರಲಾಗಿದ್ದ ಹಸು ಮತ್ತು ಕರುವಿನ ಪಾದ ತೊಳೆದು ಮಂಗಳದ್ರವ್ಯಗಳು ಮತ್ತು ಹೂವಿನಿಂದ ಅಲಂಕರಿಸಿ ಹೊಸ ವಸ್ತ್ರವನ್ನು ಅರ್ಪಿಸಲಾಯಿತು.
ದೇವಾಲಯದ ಪ್ರಧಾನ ಅರ್ಚಕ ಡಿ.ಆರ್.ಕುಮಾರಸ್ವಾಮಿ ಗೋಪೂಜೆಯ ಧಾರ್ಮಿಕ ವಿಧಿವಿಧಾನಗಳನ್ನು ನೆರವೇರಿಸಿದರು, ಮಹಾಮಂಗಳಾರತಿ ನಂತರ ಭಕ್ತರಿಗೆ ಸಿಹಿ ವಿತರಿಸಲಾಯಿತು.
ಈ ವೇಳೆ ಮಾತನಾಡಿದ ಕಂದಾಯ ನಿರೀಕ್ಷಕ ಸತ್ಯನಾರಾಯಣ ಸರ್ಕಾರದ ಸೂಚನೆಯ ಮೇರೆಗೆ ದತ್ತಪೀಠ ಸೇರಿದಂತೆ ತಾಲ್ಲೂಕಿನಲ್ಲಿರುವ ಎಲ್ಲಾ 448 ಮುಜರಾಯಿ ದೇವಾಲಯಗಳಲ್ಲೂ ದೀಪಾವಳಿ ಅಂಗವಾಗಿ ಇಂದು ಗೋಮಾತೆಗೆ ಪೂಜೆ ಸಲ್ಲಿಸಲಾಗಿದೆ ಎಂದು ತಿಳಿಸಿದರು.
ದೇವಾಲಯ ವ್ಯವಸ್ಥಾಪನಾ ಸಮಿತಿಯ ಸದಸ್ಯರಾದ ಡಿ.ಎನ್.ಮೋಹನ್ ಕುಮಾರ್, ಕೆ.ಎಸ್.ನಂಜುಂಡರಾವ್, ಸಿ.ಎಸ್.ಮಂಜುನಾಥ್, ಪುಷ್ಪಾರಾಜೇಂದ್ರ, ಉಮೇಶ್ ಪೂಜಾರಿ, ಕಾಮಧೇನು ಗೋಶಾಲೆಯ ಅಧ್ಯಕ್ಷ ಸಂಜೀವ್ ಸುವರ್ಣ ಹಾಜರಿದ್ದರು.










