ತಪ್ಪಾದ ಚುಚ್ಚುಮದ್ದು ನೀಡಿದ್ದರಿಂದ ಮಹಿಳೆ ಸಾವು – ತನಿಖೆಗೆ ಆದೇಶಿಸಿದ ಆರೋಗ್ಯ ಸಚಿವೆ.

73
firstsuddi

ತಿರುವನಂತಪುರಂ : ಜ್ವರದಿಂದ ಬಳಲುತ್ತಿದ್ದ 45 ವರ್ಷದ ಮಹಿಳೆಗೆ ತಪ್ಪಾದ ಚುಚ್ಚುಮದ್ದನ್ನು ನೀಡಿದ್ದರಿಂದ ಸಾವನ್ನಪ್ಪಿರುವ ಘಟನೆ ಕೇರಳದ ಕೋಝಿಕ್ಕೋಡ್ ವೈದ್ಯಕೀಯ ಕಾಲೇಜಿನಲ್ಲಿ ನಡೆದಿದೆ.

ಮೃತರನ್ನು ಕೋಯಿಕ್ಕೋಡ್ ನ ಕೂಡರಂಜಿ ನಿವಾಸಿ ಸಿಂಧು ಎಂದು ಗುರುತಿಸಲಾಗಿದ್ದು, ನರ್ಸ್ ತಪ್ಪು ಇಂಜೆಕ್ಷನ್ ನೀಡುವುದರಿಂದ ಸಿಂಧು ಸಾವನ್ನಪ್ಪಿದ್ದಾಳೆ ಎಂದು ಮಹಿಳೆಯ ಕುಟುಂಬಸ್ಥರು ಆರೋಪಿಸಿದ್ದಾರೆ. ಗುರುವಾರ ತೀವ್ರ ಜ್ವರದಿಂದ ಬಳಲುತ್ತಿದ್ದ ಸಿಂಧು ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು.

ಈ ಕುರಿತಂತೆ ಮಾಧ್ಯಮದವರೊಂದಿಗೆ ಮಾತನಾಡಿದ ಮೃತ ಸಿಂಧು ಪತಿ ರಘು ಅವರು, ಇದು ನರ್ಸ್ ನ ತಪ್ಪು, ಕೊನೆ ಕ್ಷಣದಲ್ಲಿ ನನ್ನ ಹೆಂಡತಿ ಬಹಳ ಬೆವರುತ್ತಿದ್ದಳು. ಇಂಜೆಕ್ಷನ್ ನೀಡಿದ ಬಳಿಕ ನಾನು ಆರೋಗ್ಯವಾಗಿಲ್ಲ ಎಂದು ಹೇಳುತ್ತಿದ್ದಳು. ಹೀಗಾಗಿ ನರ್ಸ್ ಗೆ ಕರೆ ಮಾಡಿ ಕೇಳಿದಾಗ ಭಯ ಪಡುವ ಅಗತ್ಯವಿಲ್ಲ. ಅವರ ಆರೋಗ್ಯ ಸ್ಥಿರವಾಗಿಯೇ ಇದೆ ಎಂದು ಹೇಳಿದ್ದರು.

ಆದರೆ ಇಂಜೆಕ್ಷನ್ ನೀಡಿದ ಬಳಿಕ ನನ್ನ ಪತ್ನಿ ಆರೋಗ್ಯ ಹದಗೆಡಲು ಆರಂಭವಾಯಿತು. ನನ್ನ ಮಡಿಲಿನಲ್ಲಿಯೇ ನನ್ನ ಪತ್ನಿ ಪ್ರಾಣಬಿಟ್ಟಿದ್ದಾಳೆ ಎಂದು ಹೇಳಿದ್ದಾರೆ. ಆದರೆ ಆಸ್ಪತ್ರೆ ಮಾತ್ರ ಕುಟುಂಬಸ್ಥರ ಆರೋಪವನ್ನು ನಿರಾಕರಿಸಿದ್ದು, ಮಹಿಳೆ ಅಚಾನಕ್ ಆಗಿ ಸಾವನ್ನಪ್ಪಿರವ ಬಗ್ಗೆ ಸ್ಪಷ್ಟವಾದ ಮಾಹಿತಿ ತಿಳಿದುಬಂದಿಲ್ಲ ಎಂದು ಆಸ್ಪತ್ರೆಯ ಅಧಿಕಾರಿಗಳು ತಿಳಿಸಿದ್ದಾರೆ.

ಈ ಬಗ್ಗೆ ಮೃತ ಮಹಿಳೆಯ ಕುಟುಂಬಸ್ಥರು ಪೊಲೀಸರಿಗೆ ದೂರು ನೀಡಿದ್ದು, ಘಟನೆ ಸಂಬಂಧ ಸಂಪೂರ್ಣ ತನಿಖೆ ನಡೆಸುವಂತೆ ಆರೋಗ್ಯ ಸಚಿವೆ ವೀಣಾ ಜಾರ್ಜ್ ಆದೇಶಿಸಿದ್ದಾರೆ.