ನವದೆಹಲಿ : ಕರೆನ್ಸಿ ನೋಟುಗಳ ಮೇಲೆ ಗಣೇಶ ಮತ್ತು ಲಕ್ಷ್ಮೀ ದೇವಿಯ ಚಿತ್ರಗಳನ್ನು ಮುದ್ರಿಸುವಂತೆ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದಾರೆ.
ಭಾರತೀಯ ಕರೆನ್ಸಿಯ ಒಂದು ಬದಿಯಲ್ಲಿ ಮಹಾತ್ಮ ಗಾಂಧಿ ಮತ್ತು ಇನ್ನೊಂದು ಬದಿಯಲ್ಲಿ ಗಣೇಶ ಮತ್ತು ಲಕ್ಷ್ಮೀ ದೇವಿಯ ಚಿತ್ರ ಮುದ್ರಿಸಬೇಕು ಎಂಬುದು 130 ಕೋಟಿ ದೇಶವಾಸಿಗಳ ಬಯಕೆಯಾಗಿದೆ ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ಸ್ವಾತಂತ್ರ್ಯ ಬಂದ 75 ವರ್ಷಗಳ ನಂತರವೂ ಭಾರತದ ಆರ್ಥಿಕತೆಯು ಅತ್ಯಂತ ಕೆಟ್ಟ ಸ್ಥಿತಿಯಲ್ಲಿದೆ. ನಮ್ಮ ದೇಶದಲ್ಲಿ ಇನ್ನೂ ಅನೇಕ ಜನರು ಬಡವರಿದ್ದಾರೆ ಇದಕ್ಕೆ ಕಾರಣ ಏನು? ನಾವು ಕಷ್ಟಪಟ್ಟು ಕೆಲಸ ಮಾಡಬೇಕಾದಾಗ, ನಮ್ಮ ಕೆಲಸವನ್ನು ಫಲಿಸಲು ದೇವರ ಆಶೀರ್ವಾದವೂ ಬೇಕು, ಹೀಗಾಗಿ ಹೊಸದಾಗಿ ಮುದ್ರಿಸುವ ನೋಟುಗಳಲ್ಲಿ ಲಕ್ಷ್ಮೀದೇವಿ ಮತ್ತು ಗಣೇಶ ದೇವರ ಭಾವಚಿತ್ರಗಳಿದ್ದರೆ ಇಡೀ ದೇಶಕ್ಕೆ ಆಶೀರ್ವಾದ ಸಿಗುತ್ತದೆ ಎಂದು ಕೇಜ್ರಿವಾಲ್ ಹೇಳಿದ್ದಾರೆ.
ನೋಟುಗಳ ಮೇಲೆ ಲಕ್ಷ್ಮೀ ಮತ್ತು ಗಣಪತಿ ಚಿತ್ರಗಳು ಬೇಕು ಎನ್ನುವ ಕೇಜ್ರಿವಾಲ್ ಹೇಳಿಕೆಯು ರಾಜಕೀಯ ವಲಯದಲ್ಲಿ ಸಂಚಲನ ಮೂಡಿಸಿದೆ. ಇದು ಗುಜರಾತ್ ಮತ್ತು ಹಿಮಾಚಲ ಪ್ರದೇಶದಲ್ಲಿ ಮುಂಬರುವ ಚುನಾವಣೆಗಳನ್ನು ದೃಷ್ಟಿಯಲ್ಲಿಟ್ಟುಕೊಂಡು ಮಾಡುತ್ತಿರುವ ಕೆಲಸವಾಗಿದೆ ಬಿಜೆಪಿ ಟೀಕಿಸಿದೆ.










