ಪ್ರವೀಣ್ ನೆಟ್ಟಾರು ಹತ್ಯೆ ಆರೋಪಿಗಳ ಸುಳಿವು ಕೊಟ್ಟವರಿಗೆ ಬಹುಮಾನ ಘೋಷಣೆ…

135
firstsuddi

ಮಂಗಳೂರು : ಬಿಜೆಪಿಯ ಯುವಮೋರ್ಚಾದ ಜಿಲ್ಲಾ ಕಾರ್ಯಕಾರಿಣಿ ಸದಸ್ಯ ಪ್ರವೀಣ್ ನೆಟ್ಟಾರು ಹತ್ಯೆಯಲ್ಲಿ ಭಾಗಿಯಾಗಿ ತಲೆಮರೆಸಿಕೊಂಡಿರುವ ನಾಲ್ವರು ಆರೋಪಿಗಳ ಸುಳಿವು ಕೊಟ್ಟವರಿಗೆ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್ಐಎ) ಬಹುಮಾನ ಘೋಷಣೆ ಮಾಡಿದೆ.

ಕಳೆದ ಜುಲೈ 26ರಂದು ಸುಳ್ಯ ತಾಲೂಕಿನ ಬೆಳ್ಳಾರೆಯಲ್ಲಿ ದುಷ್ಕರ್ಮಿಗಳು ಪ್ರವೀಣ್ ನೆಟ್ಟಾರು ಅವರನ್ನು ಕೊಲೆ ಮಾಡಿ ಪರಾರಿಯಾಗಿದ್ದರು. ಪ್ರಕರಣದ ತನಿಖೆ ನಡೆಸುತ್ತಿರುವ ಎನ್ ಐಎ ಅಧಿಕಾರಿಗಳು, ಪ್ರಮುಖ ಆರೋಪಿಗಳಾದ ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲ್ಲೂಕು ಬೆಳ್ಳಾರೆ ಗ್ರಾಮದ ಮೊಹಮ್ಮದ್ ಮುಸ್ತಾಫ ಎಸ್. ಅಲಿಯಾಸ್ ಮುಸ್ತಾಫ ಪೈಚಾರು ಹಾಗೂ ಕೊಡಗು ಜಿಲ್ಲೆಯ ಮಡಿಕೇರಿಯ ತುಫೈಲ್ ಬಗ್ಗೆ ಸುಳಿವು ನೀಡಿದವರಿಗೆ 5 ಲಕ್ಷ ರೂ. ಬಹುಮಾನ, ಜೊತೆಗೆ ಕೊಲೆಗೆ ಸಹಕಾರ ನೀಡಿದ ಸುಳ್ಯದ ಕಲ್ಲುಮುಟ್ಟು ಮನೆ ನಿವಾಸಿ ಉಮ್ಮರ್ ಫಾರೂಕ್ ಎಂ.ಆರ್. ಅಲಿಯಾಸ್ ಉಮ್ಮರ್ ಹಾಗೂ ಬೆಳ್ಳಾರೆ ಗ್ರಾಮದ ಅಬೂಬಕ್ಕರ್ ಸಿದ್ಧಿಕ್ ಅಲಿಯಾಸ್ ಪೇಂಟರ್ ಸಿದ್ಧಿಕ್ ಬಗ್ಗೆ ಸುಳಿವು ನೀಡಿದವರಿಗೆ ತಲಾ 2 ಲಕ್ಷ ಬಹುಮಾನ ನೀಡಲಾಗುತ್ತದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಈ ನಾಲ್ವರು ಆರೋಪಿಗಳು ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ ಸದಸ್ಯರು. ಮಾಹಿತಿದಾರರ ಹೆಸರನ್ನು ಗೋಪ್ಯವಾಗಿಡಲಾಗುವುದು. ಇವರ ಮಾಹಿತಿ ನೀಡಲು ಬಯಸುವವರು ಸಂಸ್ಥೆಯನ್ನು ಸಂಪರ್ಕಿಸಬಹುದು ಎಂದು ಎನ್ಐಎ ಹೇಳಿದೆ.

ವಿಳಾಸ: ಪೊಲೀಸ್ ವರಿಷ್ಠಾಧಿಕಾರಿ, ರಾಷ್ಟ್ರೀಯ ತನಿಖಾ ದಳ, 8ನೇ ಮಹಡಿ, ಸರ್.ಎಂ.ವಿಶ್ವೇಶ್ವರಯ್ಯ ಕೇಂದ್ರೀಯ ಸದನ, ದೊಮ್ಮಲೂರು, ಬೆಂಗಳೂರು 560071, ಸಂಪರ್ಕ: 080 29510900 ಅಥವಾ 8904241100, ಇ-ಮೇಲ್:info.blr.nia@gov.in