ಜೆರುಸಲೇಂ : ಇಸ್ರೇಲ್ ಸಾರ್ವತ್ರಿಕ ಚುನಾವಣೆಯಲ್ಲಿ ಹಾಲಿ ಪ್ರಧಾನಿ ಯೇರ್ ಲ್ಯಾಪಿಡ್ ಅವರನ್ನು ಬೆಂಜಮಿನ್ ನೆತನ್ಯಾಹು ಮಣಿಸುವ ಮೂಲಕ ಮತ್ತೊಮ್ಮೆ ಅಧಿಕಾರದ ಚುಕ್ಕಾಣಿ ಹಿಡಿದಿದ್ದಾರೆ.
ಇಸ್ರೇಲಿ ಪ್ರಧಾನಿ ಬೆಂಜಮಿನ್ ನೆತನ್ಯಾಹು ನೇತೃತ್ವದ ಒಕ್ಕೂಟವು 120 ಸ್ಥಾನಗಳ ಸಂಸತ್ತಿನಲ್ಲಿ ಬಹುಪಾಲು ಸ್ಥಾನಗಳನ್ನು ಗೆದ್ದಿದೆ. ಒಕ್ಕೂಟವು ಗೆದ್ದಿರುವ 120 ಸ್ಥಾನಗಳ ಸಂಸತ್ತಿನಲ್ಲಿ 64 ಸ್ಥಾನಗಳಲ್ಲಿ 32 ಸ್ಥಾನಗಳು ನೆತನ್ಯಾಹು ಅವರ ಪಕ್ಷದ್ದಾಗಿದೆ. ಈ ಮೂಲಕ ನೇತನ್ಯಾಹುಗೆ ಮತ್ತೆ ಪ್ರಧಾನಿ ಪಟ್ಟ ಒಲಿದು ಬಂದಿದೆ.
ಇಸ್ರೇಲ್ ಸಾರ್ವತ್ರಿಕ ಚುನಾವಣೆಯಲ್ಲಿ ಗೆದ್ದ ಬೆಂಜಮಿನ್ ನೆತನ್ಯಾಹು ಅವರನ್ನು ಪ್ರಧಾನಿ ನರೇಂದ್ರ ಮೋದಿ ಅಭಿನಂದಿಸಿದರು. ಭಾರತ ಮತ್ತು ಇಸ್ರೇಲ್ ನಡುವಿನ ಕಾರ್ಯತಂತ್ರದ ಪಾಲುದಾರಿಕೆಯನ್ನು ಗಾಢಗೊಳಿಸಲು ನಮ್ಮ ಜಂಟಿ ಪ್ರಯತ್ನಗಳನ್ನು ಮುಂದುವರಿಸಲು ನಾನು ಎದುರು ನೋಡುತ್ತಿದ್ದೇನೆ ಎಂದು ಟ್ವೀಟ್ ಮಾಡಿದ್ದಾರೆ.
ಭಾರತ ಮತ್ತು ಇಸ್ರೇಲ್ ನ ಕಾರ್ಯತಂತ್ರದ ಸಹಭಾಗಿತ್ವಕ್ಕೆ ನೀಡಿದ ಪ್ರಮುಖ ಕೊಡುಗೆಗಾಗಿ ಪ್ರಧಾನಿ ನರೇಂದ್ರ ಮೋದಿ ನಿರ್ಗಮಿಸುತ್ತಿರುವ ಇಸ್ರೇಲಿ ಪ್ರಧಾನಿ ಯೈರ್ ಲ್ಯಾಪಿಡ್ ಅವರಿಗೆ ಧನ್ಯವಾದ ಅರ್ಪಿಸಿದ್ದಾರೆ. ನಮ್ಮ ಜನರ ಪರಸ್ಪರ ಪ್ರಯೋಜನಕ್ಕಾಗಿ ನಮ್ಮ ಫಲಪ್ರದ ವಿಚಾರಗಳ ವಿನಿಮಯವನ್ನು ಮುಂದುವರಿಸಲು ನಾನು ಭಾವಿಸುತ್ತೇನೆ ಎಂದು ಮೋದಿ ಹೇಳಿದ್ದಾರೆ.










