ಅಫ್ತಾಬ್ ನನ್ನನ್ನು ತುಂಡು ತುಂಡಾಗಿ ಕತ್ತರಿಸುವುದಾಗಿ ಬೆದರಿಕೆ ಹಾಕಿದ್ದಾನೆ ; 2020ರಲ್ಲಿ ಪೊಲೀಸರಿಗೆ ದೂರು ನೀಡಿದ್ದ ಶ್ರದ್ಧಾ.

75
firstsuddi

ಮುಂಬೈ : ನನ್ನನ್ನು ತುಂಡು ತುಂಡಾಗಿ ಕತ್ತರಿಸುವುದಾಗಿ ಬೆದರಿಕೆ ಹಾಕಿದ್ದಾನೆ ಎಂದು ಅಫ್ತಾಬ್ ಪೂನಾವಾಲಾ ವಿರುದ್ಧ ಶ್ರದ್ಧಾ ವಾಕರ್ 2020ರ ನವೆಂಬರ್ 23ರಂದು ಮಹಾರಾಷ್ಟ್ರದ ಪಾಲ್ಘರ್ ನಲ್ಲಿರುವ ಟುಲಿಂಜ್ ಪೊಲೀಸ್ ಠಾಣೆಯಲ್ಲಿ ಲಿಖಿತ ದೂರೊಂದು ನೀಡಿದ್ದರು. ಆ ಪತ್ರ ಈಗ ಬಹಿರಂಗವಾಗಿದೆ.

ಪತ್ರದಲ್ಲೇನಿದೆ? : ನನ್ನನ್ನು ಉಸಿರುಗಟ್ಟಿಸಿ ಕೊಲ್ಲಲು ಪ್ರಯತ್ನಿಸಿದ್ದ, ಅವನು ನನ್ನನ್ನು ಕೊಂದು ತುಂಡು ತುಂಡಾಗಿ ಕತ್ತರಿಸಿ ಎಸೆಯುತ್ತೇನೆ ಎಂದು ಬ್ಲ್ಯಾಕ್ ಮೇಲ್ ಮಾಡುತ್ತಿದ್ದಾನೆ, 6 ತಿಂಗಳಿಂದ ನನಗೆ ಹಿಂಸೆ ನೀಡುತ್ತಿದ್ದಾನೆ, ಕೊಲೆ ಮಾಡುತ್ತಾನೆಂಬ ಹೆದರಿಕೆಯಿಂದ ಪೊಲೀಸರ ಬಳಿ ಹೋಗುವ ಧೈರ್ಯ ನನಗಿರಲಿಲ್ಲ. ಅಫ್ತಾಬ್ ನನ್ನನ್ನು ಹೊಡೆಯುವುದು, ಹಿಂಸಿಸುವುದು ಅವನ ಪೋಷಕರಿಗೂ ಗೊತ್ತಿತ್ತು.

ನಾವು ಸದ್ಯದಲ್ಲಿಯೇ ಮದುವೆಯಾಗಲಿದ್ದೇವೆ ಎಂಬ ಭರವಸೆಯಿಂದ ಇವತ್ತಿನವರೆಗೂ ಅವನ ಜೊತೆ ವಾಸಿಸುತ್ತಿದ್ದೆ. ಅವನ ಕುಟುಂಬದ ಬೆಂಬಲ ಆಶೀರ್ವಾದ ಕೂಡ ಸಿಗಬಹುದೆಂದು ನಂಬಿದ್ದೆ. ಆದರೆ ಇನ್ನು ಮುಂದೆ ಅವನ ಜೊತೆ ವಾಸಿಸಲು ನನಗೆ ಇಚ್ಛೆಯಿಲ್ಲ. ನನ್ನನ್ನು ಎಲ್ಲಿಯಾದರೂ ಕಂಡರೆ ಕೊಂದು ಹಾಕುವುದಾಗಿ ಇಲ್ಲವೇ ಹೊಡೆಯುವುದಾಗಿ ನನಗೆ ಬೆದರಿಕೆ ಹಾಕಿರುವುದರಿಂದ ಅವನಿಂದ ಶಾರೀರಿಕವಾಗಿ ತೊಂದರೆಯಾದರೂ ಆಗಬಹುದು ಎಂದು ಶ್ರದ್ಧಾ ಪತ್ರದಲ್ಲಿ ಹೇಳಿಕೊಂಡಿದ್ದಾರೆ.

ಪೊಲೀಸರು ಈ ದೂರಿನ ಕುರಿತು ಆಗಲೇ ತನಿಖೆ ನಡೆಸಿದ್ದರು. ಆದರೆ ನಂತರ ಶ್ರದ್ಧಾ ತನ್ನ ದೂರನ್ನು ಹಿಂಪಡೆಯುವುದಾಗಿ ಮತ್ತೊಂದು ಪತ್ರ ನೀಡಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.