ನವದೆಹಲಿ : ರಾಷ್ಟ್ರ ರಾಜಧಾನಿಯಲ್ಲಿ ಮತ್ತೊಂದು ಭೀಕರ ಕೊಲೆ ಪ್ರಕರಣ ಬೆಳಕಿಗೆ ಬಂದಿದೆ. ನೈಋತ್ಯ ದೆಹಲಿಯ ಪಾಲಮ್
ಪ್ರದೇಶದಲ್ಲಿ ಒಂದೇ ಕುಟುಂಬದ ನಾಲ್ವರನ್ನು ಪುತ್ರನೇ ಹತ್ಯೆ ಮಾಡಿದ್ದಾನೆ.
ಕೇಶವ್ (25) ಬಂಧಿತ ಆರೋಪಿ. ಕೇಶವ್ ಒಂದು ತಿಂಗಳ ಹಿಂದೆ ಗುರ್ಗಾಂವ್ ನಲ್ಲಿ ಕೆಲಸ ಬಿಟ್ಟು ಮನೆಗೆ ಬಂದಿದ್ದ. ಮಾದಕ ವ್ಯಸನಿಯಾಗಿದ್ದ ಕೇಶವ್ ನಿನ್ನೆ ಡ್ರಗ್ಸ್ ನ ಅಮಲಿನಲ್ಲಿ ತನ್ನ ಅಜ್ಜಿ ದೀವಾನಾ ದೇವಿ (75), ತಂದೆ ದಿನೇಶ್ (50), ತಾಯಿ ದರ್ಶನಾ ಮತ್ತು ಸಹೋದರಿ ಊರ್ವಶಿ (18)ಗೆ ಚಾಕುವಿನಿಂದ ಇರಿದು ವಿಕೃತಿಯನ್ನು ಮರೆದಿದ್ದಾನೆ.
ಈ ವೇಳೆ ಮನೆಯಲ್ಲಿದ್ದವರ ಕಿರುಚಾಟ ಕೇಳಿದ ಅದೇ ಕಟ್ಟಡದಲ್ಲಿದ್ದ ನೆರೆಹೊರೆಯವರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಕೂಡಲೇ ಪೊಲೀಸರು ಸ್ಥಳಕ್ಕಾಗಮಿಸಿದ್ದಾರೆ. ಆದರೆ ಅಷ್ಟರಲ್ಲಾಗಲೇ ಕೇಶವ್ ಕುಟುಂಬಸ್ಥರ ಜೀವ ಹೊರಟು ಹೋಗಿದ್ದು, ಇಡೀ ಮನೆ ರಕ್ತಸಿಕ್ತವಾಗಿತ್ತು. ಕೇಶವ್ ನ ತಂದೆ- ತಾಯಿಯ ಶವವು ಸ್ನಾನಗೃಹದಲ್ಲಿ ಮತ್ತು ಆತನ ಸಹೋದರಿ ಮತ್ತು ಅಜ್ಜಿಯ ಮೃತದೇಹಗಳು ಇತರ ಕೊಠಡಿಗಳಲ್ಲಿ ಪತ್ತೆಯಾಗಿದೆ.
ಪೊಲೀಸರು ಸ್ಥಳಕ್ಕಾಗಮಿಸಿದ್ದನ್ನು ಗಮನಿಸಿದ ಕೇಶವ್ ಸ್ಥಳದಿಂದ ಪರಾರಿಯಾಗಲು ಪ್ರಯತ್ನಿಸಿದ್ದು, ಸ್ಥಳೀಯರು ಹಾಗೂ ಸಂಬಂಧಿಕರು ಆತನನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.










