ಬೆಂಗಳೂರು : ಪಿಎಸ್ಐ ಪರೀಕ್ಷಾ ನೇಮಕಾತಿಯಲ್ಲಿ ನಡೆದ ಅಕ್ರಮ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಎಡಿಜಿಪಿ ಆಗಿದ್ದ ಅಮೃತ್ ಪಾಲ್ ಜಾಮೀನು ಅರ್ಜಿ ಮತ್ತೆ ವಜಾಗೊಂಡಿದೆ.
ಪಿಎಸ್ಐ ನೇಮಕಾತಿಯ ಉಸ್ತುವಾರಿ ವಹಿಸಿದ್ದ ಅಮೃತ್ ಪಾಲ್ ಬಳಿ ಸೇಫ್ ಲಾಕರ್ ನ ಕೀ ಇತ್ತು. ಕಿರಿಯ ಅಧಿಕಾರಿಗಳಿಗೆ ಕೀ ಕೊಟ್ಟು ದುರುಪಯೋಗ ಮಾಡಲಾಗಿದೆ. ಪ್ರಕರಣದ ತನಿಖೆ ಇನ್ನೂ ಮುಕ್ತಾಯವಾಗಿಲ್ಲ. ಈ ಹಿನ್ನೆಲೆಯಲ್ಲಿ ಜಾಮೀನು ನೀಡದಂತೆ ಎಸ್ ಪಿ ಪ್ರಸನ್ನ ಕುಮಾರ್ ವಾದ ಮಂಡಿಸಿದರು.
ವಾದ-ಪ್ರತಿವಾದ ಆಲಿಸಿದ ಬೆಂಗಳೂರಿನ 24ನೇ ಸಿಸಿಹೆಚ್ ನ್ಯಾಯಾಲಯದ ನ್ಯಾಯಮೂರ್ತಿ ಕೆ. ಲಕ್ಷ್ಮಿ ನಾರಾಯಣ ಭಟ್ ಅವರು ಅಮೃತ್ ಪಾಲ್ ಜಾಮೀನು ಅರ್ಜಿ ತಿರಸ್ಕರಿಸಿ ಆದೇಶ ಹೊರಡಿಸಿದ್ದಾರೆ. ಇದರಿಂದ ಅಮೃತ್ ಪಾಲ್ ಗೆ ಜೈಲೇ ಗತಿಯಾಗಿದೆ.
ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಅಮೃತ್ ಪಾಲ್ ಈ ಹಿಂದೆ ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ಬೆಂಗಳೂರಿನ 1ನೇ ಎಸಿಎಂಎಂ ನ್ಯಾಯಾಲಯ ವಜಾಗೊಳಿಸಿತ್ತು. ಇದೀಗ ಬೆಂಗಳೂರಿನ 24ನೇ ಸಿಸಿಹೆಚ್ ಕೋರ್ಟ್ ಸಹ ಜಾಮೀನು ಅರ್ಜಿಯನ್ನು ತಿರಸ್ಕರಿಸಿದೆ.










