ಬೆಂಗಳೂರು : ಕೇಂದ್ರ ಸರ್ಕಾರ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ(ಪಿಎಫ್ಐ) ಸಂಘಟನೆಯನ್ನು ನಿಷೇಧಿಸಿದ್ದನ್ನು ಪ್ರಶ್ನಿಸಿ ಸಲ್ಲಿಸಲಾದ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ ತೀರ್ಪು ಕಾಯ್ದಿರಿಸಿದೆ. ಕರ್ನಾಟಕದ ಪಿಎಫ್ ಐ ಅಧ್ಯಕ್ಷ ನಾಸಿರ್ ಅಲಿ ನಿಷೇಧವನ್ನು ಪ್ರಶ್ನಿಸಿ ರಿಟ್ ಅರ್ಜಿ ಸಲ್ಲಿಸಿದ್ದರು.
ಅರ್ಜಿದಾರರ ಪರ ವಾದ ಮಂಡಿಸಿದ ವಕೀಲ ಜಯಕುಮಾರ್ ಎಸ್.ಪಾಟೀಲ್ ಪಿಎಫ್ಐ ಕಾನೂನು ಬಾಹಿರ ಸಂಘಟನೆ ಎಂದು ಘೋಷಿಸಲಾಗಿದೆ. ಆದರೆ ಪಿಎಫ್ ಐ ಕಾನೂನು ಬಾಹಿರ ಸಂಘಟನೆ ಎನ್ನಲು ಕಾರಣ ನೀಡಿಲ್ಲ. ತಕ್ಷಣದ ಬ್ಯಾನ್ ಗೆ ಪ್ರತ್ಯೇಕ ಕಾರಣ ನೀಡಬೇಕಿತ್ತು. ವಾದಮಂಡನೆಗೆ ಕಾಲಾವಕಾಶ ನೀಡದೇ ಬ್ಯಾನ್ ಮಾಡಲಾಗಿದೆ. ಯುಎಪಿಎ ಕಾಯ್ದೆಗೆ ವಿರುದ್ಧವಾಗಿ ಆದೇಶ ಹೊರಡಿಸಲಾಗಿದೆ ಎಂದು ವಾದ ಮಂಡಿಸಿದ್ದಾರೆ.
ಕೇಂದ್ರ ಸರ್ಕಾರದ ಪರ ವಾದ ಮಂಡಿಸಿದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಪಿಎಫ್ ಐ ಸಂಘಟನೆಯಿಂದ ದೇಶ ವಿರೋಧಿ ಚಟುವಟಿಕೆ ನಡೆಯುತ್ತಿದೆ. ದೇಶದಲ್ಲಿ ಹಿಂಸಾತ್ಮಕ ಕೃತ್ಯಗಳನ್ನು ಎಸಗುತ್ತಿದ್ದಾರೆ. ಸಂಘಟನೆಯ ಸದಸ್ಯರಿಂದ ಭೀತಿಯ ವಾತಾವರಣ ಸೃಷ್ಟಿಯಾಗಿದೆ. ಹೀಗಾಗಿ ಸರ್ಕಾರದಿಂದಲೇ ಪಿಎಫ್ ಐ ಸಂಘಟನೆ ನಿರ್ಬಂಧಿಸಲಾಗಿದೆ ಎಂದರು.










