ದಿವ್ಯಾಂಗರಿಗೆ 5 ಲಕ್ಷ ರೂ.ಗಳ ವಿಶೇಷ ಆರೋಗ್ಯ ವಿಮೆ : ಸಿಎಂ ಬೊಮ್ಮಾಯಿ ಘೋಷಣೆ…

68
firstsuddi

ಬೆಂಗಳೂರು : ದಿವ್ಯಾಂಗರಿಗೆ 5 ಲಕ್ಷ ರೂ.ಗಳ ವಿಶೇಷ ಆರೋಗ್ಯ ವಿಮೆಯನ್ನು ಸಿಎಂ ಬಸವರಾಜ ಬೊಮ್ಮಾಯಿ ಘೋಷಿಸಿದ್ದಾರೆ.

ಇಂದು ವಿಶ್ವ ವಿಕಲಚೇತನರ ದಿನಾಚರಣೆ ಪ್ರಯುಕ್ತ ನಗರದ ಕಂಠೀರವ ಒಳಾಂಗಣ ಕ್ರೀಡಾಂಗಣದಲ್ಲಿ ವಿಕಲಚೇತನ ಹಾಗೂ ಹಿರಿಯ ನಾಗರೀಕರ ಸಬಲೀಕರಣ ನಿರ್ದೇಶನಾಲಯ ವತಿಯಿಂದ ಕಾರ್ಯಕ್ರಮ ಆಯೋಜನೆ ಮಾಡಲಾಗಿತ್ತು. ಈ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಬೊಮ್ಮಾಯಿ, ಸರ್ಕಾರ ನೀಡುವ ಮನೆಗಳಲ್ಲಿ ದಿವ್ಯಾಂಗರಿಗೆ 3% ಮೀಸಲಿಡುತ್ತೇವೆ. ವಿಕಲಚೇತನ ಮಕ್ಕಳಿಗೆ ನೀಡುವ ಟ್ರೈಸೈಕಲ್ ಗೆ ಹೆಚ್ಚುವರಿಯಾಗಿ 28 ಕೋಟಿ ರೂ. ಬಿಡುಗಡೆ ಮಾಡಿ, 2,000 ಸೈಕಲ್ ನೀಡುವ ವ್ಯವಸ್ಥೆ ಮಾಡಲಾಗುವುದು ಎಂದಿದ್ದಾರೆ.

ದೇವರು ಸೃಷ್ಟಿಸುವಾಗ ಹಲವಾರು ಸವಾಲುಗಳನ್ನು ಮನುಷ್ಯರಲ್ಲಿ ಹುಟ್ಟಿಹಾಕ್ತಾನೆ. ಎಲ್ಲಾ ಅಂಗಾಂಗಳು ಇದ್ದರೂ ಹಲವು ಕೊರತೆಗಳು ಇರುತ್ತವೆ. ನಿಮ್ಮಲ್ಲಿ ಯಾರಿಗೂ ಕಡಿಮೆ ಇದ್ದೇವೆ ಎಂಬ ಕೊರಗು ಬೇಡ. ನೀವು ದೇವರ ಮಕ್ಕಳು. ವಿಶೇಷ ಶಕ್ತಿ ಹೊಂದಿರುವ ಮಕ್ಕಳು ನೀವು. ನಮ್ಮೆಲ್ಲರಿಗಿಂತಲೂ ಶಕ್ತಿಶಾಲಿ ಮಕ್ಕಳು ನೀವು. ಬದುಕಿ ತೋರಿಸೋ ಛಲ ನಿಮ್ಮಲ್ಲಿ ಇರಲಿ. ಮಾನವೀಯ ಧರ್ಮವನ್ನು ಪ್ರತಿಯೊಬ್ಬ ಮನುಷ್ಯನಿಗೂ ದೇವರು ಕೊಟ್ಟಿರ್ತಾನೆ. ಅದನ್ನು ಕೆಲವರು ಮರೆಯುತ್ತಾರೆ, ಕೆಲವರು ಅಳವಡಿಸಿಕೊಳ್ತಾರೆ ಎಂದು ಅಭಿಪ್ರಾಯಪಟ್ಟರು.

ಕಾರ್ಯಕ್ರಮದಲ್ಲಿ ಸಚಿವ ಹಾಲಪ್ಪ ಆಚಾರ್, ಸಂಸದ ಪಿ.ಸಿ ಮೋಹನ್, ಕಾಂಗ್ರೆಸ್ ಶಾಸಕ ರಿಜ್ವಾನ್ ಅರ್ಷದ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.