ಚಿಕ್ಕಮಗಳೂರು : ಆಧುನಿಕತೆಯ ಅಬ್ಬರದಲ್ಲಿ ಕಣ್ಮರೆಯಾಗುತ್ತಿರುವ ನಮ್ಮ ಸಂಸ್ಕೃತಿಯನ್ನು ಗ್ರಾಮೀಣ ಜನತೆ ಜತನದಿಂದ ಕಾಪಾಡಿಕೊಳ್ಳಬೇಕು ಎಂದು ಕರ್ನಾಟಕ ಜಾನಪದ ಪರಿಷತ್ತಿನ ಜಿಲ್ಲಾಧ್ಯಕ್ಷ ಜಿ.ಬಿ.ಸುರೇಶ್ ಮನವಿ ಮಾಡಿದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಬೆಳವಾಡಿಯ ಶ್ರೀ ಬಸವೇಶ್ವರ ಭಜನಾ ಸಂಘ ಹನುಮ ಜಯಂತಿ ಪ್ರಯುಕ್ತ ಕಡೂರು ತಾಲ್ಲೂಕಿನ ಯಗಟಿಯಲ್ಲಿ ನಿನ್ನೆ ಏರ್ಪಡಿಸಿದ್ದ ಭಜನಾ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ನಮ್ಮ ಹಿರಿಯರ ಕಾಲದಲ್ಲಿ ಪ್ರತಿ ಗ್ರಾಮಗಳಲ್ಲೂ ಭಜನಾ ತಂಡಗಳಿದ್ದವು, ಹಬ್ಬ ಹರಿದಿನಗಳಲ್ಲಿ ಶ್ರಾವಣ ಮಾಸ, ಕಾರ್ತಿಕ ಮಾಸ, ಶನಿವಾರ, ಸೋಮವಾರದ ದಿನಗಳಲ್ಲಿ ಹಳ್ಳಿಯ ಜನರೆಲ್ಲಾ ಒಂದಾಗಿ ಕಲೆತು ಗ್ರಾಮದ ದೇವಾಲಯಗಳಲ್ಲಿ ಭಜನೆ, ಭಕ್ತಿಗೀತೆ, ಜಾನಪದ ಗೀತೆ, ಕೋಲಾಟ ಮುಂತಾದ ಕಾರ್ಯಕ್ರಮಗಳನ್ನು ನಡೆಸುತ್ತಿದ್ದರು ಎಂದರು.
ಅದರಿಂದಾಗಿ ಅಂದು ಗ್ರಾಮಗಳಲ್ಲಿ ಒಗ್ಗಟ್ಟಿತ್ತು ಎಂದ ಅವರು ಆಧುನಿಕತೆಯ ಬಿರುಗಾಳಿ ಬೀಸಿದಂತೆ ಹಳ್ಳಿಯ ಸಂಪ್ರದಾಯಗಳು ದಿನೇದಿನೇ ಕಣ್ಮರೆಯಾಗ ತೊಡಗಿದ್ದು, ನಮ್ಮ ಸಂಸ್ಕೃತಿ ನಾಶವಾಗುತ್ತಿದೆ ಎಂದು ವಿಷಾದಿಸಿದರು.
ಪಟ್ಟಣ ಮತ್ತು ನಗರ ಪ್ರದೇಶಗಳ ಜನರು ಪಾಶ್ಚಾತ್ಯ ಸಂಸ್ಕೃತಿಗೆ ಒಗ್ಗಿ ಹೋಗಿರುವುದರಿಂದ ಅವರಿಂದ ಏನನ್ನೂ ನಿರೀಕ್ಷಿಸಲಾಗದು, ಇಂತಹ ಪರಿಸ್ಥಿತಿಯಲ್ಲಿ ಗ್ರಾಮೀಣ ಜನತೆ ಮನಸ್ಸು ಮಾಡಿ ಹಳೆದ ಸಂಪ್ರದಾಯಗಳನ್ನು ಮತ್ತೆ ಮುಂದುವರೆಸಿದರೆ ಮಾತ್ರ ನಮ್ಮ ಸಂಸ್ಕೃತಿ ಮುಂದಿನ ತಲೆ ಮಾರಿಗೆ ಉಳಿಯುತ್ತದೆ ಎಂದು ಕಿವಿಮಾತು ಹೇಳಿದರು.
ಕಡೂರು ತಾಲ್ಲೂಕು ಕಸಾಪ ಮಾಜಿ ಅಧ್ಯಕ್ಷ ರವಿಪ್ರಕಾಶ್ ಮಾತನಾಡಿ ಭಜನೆಯಿಂದ ಅಧ್ಯಾತ್ಮಿಕವಾಗಿ ಬೆಳೆಯಲು ಸಾಧ್ಯವಾಗುತ್ತದೆ ಎಂದು ಹೇಳಿದರು.
ಗ್ರಾ.ಪಂ. ಅಧ್ಯಕ್ಷ ಗೋವಿಂದಪ್ಪ, ಕರ್ನಾಟಕ ಜಾನಪದ ಪರಿಷತ್ತಿನ ತಾಲ್ಲೂಕು ಅಧ್ಯಕ್ಷ ಜಗದೀಶ್ವರಾಚಾರ್, ಅರ್ಚಕ ನಾಗರಾಜ್, ಮನೋಹರ್, ಗ್ರಾಮದ ಮುಖಂಡ ಚಂದ್ರಪ್ಪ, ಕಲಾವಿದ ಪರಮೇಶ್ವರಪ್ಪ, ಬೆಳವಾಡಿ ಗ್ರಾ.ಪಂ. ಅಧ್ಯಕ್ಷೆ ಭಾಗ್ಯ, ಶಿಕ್ಷಕ ಚಂದ್ರಶೇಖರ್ ಉಪಸ್ಥಿತರಿದ್ದರು. ಕಾರ್ಯಕ್ರಮದ ನಂತರ ಭಜನೆ, ಭಕ್ತಿಗೀತೆ, ಜಾನಪದ ಗೀತೆಗಳ ಗಾಯನ, ನೃತ್ಯ, ಸಾಂಸ್ಕೃತಿಕ ಕಾರ್ಯಕ್ರಮ ಜರುಗಿತು.










