ಮದುವೆ ಮನೆಯಲ್ಲಿ ಸಿಲಿಂಡರ್ ಸ್ಫೋಟಗೊಂಡು 5 ಮಂದಿ ಸಾವು, 49 ಜನರಿಗೆ ಗಾಯ…

63
firstsuddi

ಜೈಪುರ : ಮದುವೆ ಮನೆಯಲ್ಲಿ ಅಡುಗೆ ಅನಿಲ ಸಿಲಿಂಡರ್ ಸ್ಫೋಟಗೊಂಡ ಪರಿಣಾಮ ಐವರು ಸಾವನ್ನಪ್ಪಿದ್ದು, 49 ಮಂದಿ ಗಾಯಗೊಂಡಿದ್ದಾರೆ. ರಾಜಸ್ಥಾನದ ಜೋಧ್ ಪುರದಿಂದ 60 ಕಿ.ಮೀ ದೂರದಲ್ಲಿರುವ ಭುಂಗ್ರಾ ಗ್ರಾಮದಲ್ಲಿ ದುರ್ಘಟನೆ ನಡೆದಿದೆ.

ಗಾಯಗೊಂಡವರಲ್ಲಿ ಕೆಲವರಿಗೆ ಶೇ.80ರಿಂದ 100ರಷ್ಟು ಸುಟ್ಟ ಗಾಯಗಳಾಗಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಮದುಮಗ ಸುರೇಂದ್ರ ಸಿಂಗ್ ಅವರ ಮನೆಯಲ್ಲಿ ಮದುವೆ ಸಂಭ್ರಮಕ್ಕೆ ಅತಿಥಿಗಳು ಜಮಾಯಿಸಿದ್ದರು ಮತ್ತು ಅವರಿಗೆ ಊಟೋಪಚಾರ ಸಿದ್ಧಪಡಿಸಲಾಗಿತು. ಮನೆಯ ಸ್ಟೋರ್ ರೂಂನಲ್ಲಿ ಇರಿಸಲಾಗಿದ್ದ ಅಡುಗೆ ಅನಿಲ ಸಿಲಿಂಡರ್ ಸೋರಿಕೆಯಿಂದಾಗಿ ಬೆಂಕಿ ಹೊತ್ತಿಕೊಂಡು ಸ್ಫೋಟಗೊಂಡಿದೆ. ಎಲ್ಲಾ ಗಾಯಾಳುಗಳನ್ನು ಎಂಜಿ ಆಸ್ಪತ್ರೆಗೆ ರವಾನಿಸಲಾಗಿದೆ ಎಂದು ಜೋಧ್ ಪುರ (ಗ್ರಾಮೀಣ) ಪೊಲೀಸ್ ವರಿಷ್ಠಾಧಿಕಾರಿ ಅನಿಲ್ ಕಯಾಲ್ ಹೇಳಿದ್ದಾರೆ.

ಸ್ಫೋಟದಲ್ಲಿ 49 ಮಂದಿ ಗಾಯಗೊಂಡಿದ್ದು, ಐವರು ಸಾವನ್ನಪ್ಪಿದ್ದಾರೆ ಎಂದು ಜಿಲ್ಲಾಧಿಕಾರಿ ಹಿಮಾಂಶು ಗುಪ್ತಾ ತಿಳಿಸಿದ್ದಾರೆ. ಎಂಜಿ ಆಸ್ಪತ್ರೆಯ ಸೂಪರಿಂಟೆಂಡೆಂಟ್ ರಾಜ್ ಶ್ರೀ ಬೆಹ್ರಾ ಅವರು ಆಸ್ಪತ್ರೆಗೆ ಕರೆತರಲಾದ ಹತ್ತಕ್ಕೂ ಹೆಚ್ಚು ಗಾಯಾಳುಗಳು ಶೇಕಡಾ 80-100 ರಷ್ಟು ಸುಟ್ಟಗಾಯಗಳಿಗೆ ಒಳಗಾಗಿದ್ದಾರೆ ಮತ್ತು ಅವರ ಸ್ಥಿತಿ ಗಂಭೀರವಾಗಿದೆ ಎಂದು ಹೇಳಿದರು.

ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಮತ್ತು ಕೇಂದ್ರ ಸಚಿವ ಮತ್ತು ಜೋಧ್‌ಪುರ ಸಂಸದ ಗಜೇಂದ್ರ ಸಿಂಗ್ ಶೇಖಾವತ್ ಅವರು ಘಟನೆಯಲ್ಲಿ ಜೀವಹಾನಿಯ ಬಗ್ಗೆ ಸಂತಾಪ ವ್ಯಕ್ತಪಡಿಸಿದ್ದಾರೆ. ಗಾಯಾಳುಗಳಿಗೆ ಉತ್ತಮ ಚಿಕಿತ್ಸೆ ನೀಡುವಂತೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ.