ಬೆಂಗಳೂರು : ಸಿಲಿಕಾನ್ ಸಿಟಿಯಲ್ಲಿ ಬೀದಿ ನಾಯಿಗಳ ಹಾವಳಿ ಹೆಚ್ಚಾಗಿದೆ. ಭಾನುವಾರ ರಾತ್ರಿ ಬಿಬಿಎಂಪಿ ವ್ಯಾಪ್ತಿಯ ಲಕ್ಷ್ಮೀದೇವಿ ನಗರದಲ್ಲಿ ಎಂಟು ವರ್ಷದ ಬಾಲಕಿ ಮೇಲೆ ಬೀದಿ ನಾಯಿ ದಾಳಿ ನಡೆಸಿದೆ. ದಾಳಿಯಲ್ಲಿ ಮಗುವಿನ ಕತ್ತು ಮತ್ತು ಮುಖದ ಭಾಗದಲ್ಲಿ ಗಾಯಗಳಾಗಿದ್ದು, ಹೊಲಿಗೆ ಹಾಕಲಾಗಿದೆ.
ನೂರಿನ್ ಫಲಕ್ ತಡರಾತ್ರಿ ತನ್ನ ತಂದೆ ಫಕ್ರುದ್ದೀನ್ ನೊಂದಿಗೆ ಹೊರಗೆ ಹೋಗುತ್ತಿದ್ದಾಗ ನಾಯಿಯು ಬಾಲಕಿಯನ್ನು ಹಿಂಬಾಲಿಸಿ ದಾಳಿ ಮಾಡಿದೆ. ಈ ವೇಳೆ ಬಾಲಕಿಯ ತಂದೆ ಮಗಳ ರಕ್ಷಣೆಗೆ ಧಾವಿಸಿ, ನಾಯಿಯನ್ನು ದೂರ ಓಡಿಸಲು ಯತ್ನಿಸಿದ್ದಾರೆ. ಈ ವೇಳೆ ನಾಯಿ ತಂದೆ-ಮಗಳಿಬ್ಬರ ಮೇಲೂ ದಾಳಿ ಮಾಡಿದೆ. ಇಬ್ಬರಿಗೂ ಆಂಟಿ ರೇಬಿಸ್ ಇಂಜೆಕ್ಷನ್ ಹಾಕಲಾಗಿದೆ.
ಘಟನೆ ಸಂಬಂಧ ಮಾತನಾಡಿದ ಬಿಬಿಎಂಪಿ ಪಶುಸಂಗೋಪನಾ ಇಲಾಖೆಯ ಸಹಾಯಕ ನಿರ್ದೇಶಕ ಮಂಜುನಾಥ ಶಿಂಧೆ, ಮಗುವಿಗೆ ಗಾಯಗಳಾಗಿದ್ದು, ಆಕೆಯ ಮುಖ ಮತ್ತು ಕುತ್ತಿಗೆ ಭಾಗದಲ್ಲಿ ಹೊಲಿಗೆ ಹಾಕಲಾಗಿದೆ. ಬಾಲಕಿ ಅಪಾಯದಿಂದ ಪಾರಾಗಿದ್ದಾಳೆ. ನಾವು ಚಿಕಿತ್ಸೆಯ ವೆಚ್ಚವನ್ನು ಭರಿಸುತ್ತೇವೆ. ಹಾಗೂ ಪರಿಹಾರವಾಗಿ 10,000 ರೂ. ನೀಡುತ್ತೇವೆ ಎಂದರು.










