ಎರಡು ದಾಖಲೆ ನಿರ್ಮಿಸಿದ ಜೆಡಿಎಸ್​ನ ಪಂಚರತ್ನ ರಥಯಾತ್ರೆ…

67
firstsuddi

ತುಮಕೂರು : ಜೆಡಿಎಸ್​ನ ಪಂಚರತ್ನ ರಥಯಾತ್ರೆಯು ಎರಡು ದಾಖಲೆಗಳನ್ನು ನಿರ್ಮಿಸಿದೆ. ಪಂಚರತ್ನ ರಥಯಾತ್ರೆಯಲ್ಲಿ ರಾಜ್ಯದ ಜನರು ವಿವಿಧ ಬಗೆಯ ಬೃಹತ್ ಹಾರಗಳನ್ನು ಹಾಕಿ ಗೌರವಿಸಿದ ಹಿನ್ನೆಲೆಯಲ್ಲಿ ಮಾಜಿ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ಅವರು ‘ ಏಷ್ಯಾ ಬುಕ್ ಆಫ್ ರೆಕಾರ್ಡ್ಸ್ ‘ ಹಾಗೂ ‘ ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ ‘ ದಾಖಲೆಗೆ ಪಾತ್ರರಾಗಿದ್ದಾರೆ.

ಏಷ್ಯಾ ಬುಕ್ ಆಫ್ ರೆಕಾರ್ಡ್ಸ್ ‘ ತೀರ್ಪುಗಾರರಾದ ಮೋಹಿತ್ ಕುಮಾರ್ ವತ್ಸ ಹಾಗೂ ‘ ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ ‘ ತೀರ್ಪುಗಾರರಾದ ಆರ್.ಹರೀಶ್ ಅವರು ಮಾಜಿ ಮುಖ್ಯಮಂತ್ರಿ ಅವರಿಗೆ ಎರಡೂ ದಾಖಲೆಗಳ ಪತ್ರಗಳು ಮತ್ತು ಮೆಡಲ್ ಗಳನ್ನು ಹಸ್ತಾಂತರ ಮಾಡಿದರು.

ಈ ಸಂದರ್ಭದಲ್ಲಿ ಮಾತನಾಡಿದ ಏಷ್ಯಾ ಬುಕ್ ಆಫ್ ರೆಕಾರ್ಡ್ಸ್ ‘ ತೀರ್ಪುಗಾರರಾದ ಮೋಹಿತ್ ಕುಮಾರ್ ಅವರು, ಇದೊಂದು ವಿಶೇಷವಾದ ದಾಖಲೆ. ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ರಾಜಕಾರಣಿಯೊಬ್ಬರು ಗೌರವಕ್ಕೆ ಪಾತ್ರರಾಗಿರುವುದು ಹಾಗೂ ರೈತರೇ ಬೇಳೆಗಳನ್ನೇ ಬೃಹತ್ ಹಾರಗಳನ್ನಾಗಿ ತಯಾರಿಸಿ ಅವರಿಗೆ ಹಾಕಿ ಸ್ವಾಗತಿಸುತ್ತಿರುವುದು ಸೋಜಿಗ, ಮೊದಲ ದಾಖಲೆ ಎಂದರು.

ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ಮಾತನಾಡಿ, ಇದು ನನಗೆ ಅಚ್ಚರಿಯ ಗೌರವ. ಈ ದಾಖಲೆಗಳನ್ನು ನನ್ನ ನಾಡಿನ ರೈತರು ಹಾಗೂ ನಮ್ಮ ಪಕ್ಷದ ಕಾರ್ಯಕರ್ತರಿಗೆ ಸಮರ್ಪಣೆ ಮಾಡುತ್ತೇನೆ. ನಾನು ರಥಯಾತ್ರೆ ಮಾಡುತ್ತಿರುವ ಎಲ್ಲಾ ಕಡೆ ಜನರು ನನ್ನನ್ನು ಪ್ರೀತಿಯಿಂದ ಸ್ವಾಗತ ಮಾಡುತ್ತಿದ್ದಾರೆ. ದೊಡ್ಡ ದೊಡ್ಡ ಹಾರಗಳನ್ನು ಹಾಕಿ ಸ್ವಾಗತ ಮಾಡುತ್ತಿದ್ದಾರೆ. ಆ ಜನರ ಪ್ರೀತಿಯಿಂದ ಮಾತ್ರ ಈ ದಾಖಲೆ ನಿರ್ಮಾಣವಾಗಲು ಸಾಧ್ಯವಾಗಿದೆ. ಹೀಗಾಗಿ ಈ ಎಲ್ಲಾ ದಾಖಲೆಯ ಹೆಗ್ಗಳಿಕೆ ಅವರಿಗೆ ಸಲ್ಲಬೇಕು ಎಂದರು.

ಪಂಚತಂತ್ರ ಯಾತ್ರೆ ಇದೀಗ 35ನೇ ದಿನಕ್ಕೆ ಕಾಲಿಟ್ಟಿದೆ. ಹಾರಗಳ ಸಂಖ್ಯೆ 500ರ ಗಡಿ ದಾಟಿದೆ. ನಿನ್ನೆ ತುಮಕೂರು ಗ್ರಾಮಾಂತರ ಕ್ಷೇತ್ರ ಒಂದರಲ್ಲೇ 30ಕ್ಕೂ ಹೆಚ್ಚು ಬೃಹತ್ ಹಾರಗಳನ್ನು ಮಾಜಿ ಮುಖ್ಯಮಂತ್ರಿ ಅವರಿಗೆ ಹಾಕಿ ಗೌರವಿಸಲಾಯಿತು. ಈ ಕ್ಷೇತ್ರದಲ್ಲಿ ಸೇಬು, ಸೌತೆಕಾಯಿ, ಕಬ್ಬಿನ ಹಾರಗಳ ಜೊತೆಗೆ ನಾಣ್ಯದ ಹಾರ, ಭತ್ತ ನೇಗಿಲು ಹಾರ, ಎತ್ತಿನ ಲಾಳದ ಹಾರ, ಜೆಡಿಎಸ್ ಚಿಹ್ನೆ ಹಾರ, ಮಣ್ಣಿನ ಹಾರ, ಕಿರೀಟದ ಹಾರ, ಮಹಿಳೆಯರು ಹಾಕಿದ ರಾಖಿ ಹಾರ, ಗೂಳೂರು ಕರ್ಜಿಕಾಯಿ ಹಾರ, ವಿವಿಧ ತರಕಾರಿಗಳ ಹಾರ, ವಿವಿಧ ಹಣ್ಣುಗಳ ಹಾರ, ಎಲ್ ಇ ಡಿ ಹಾರ ಸೇರಿದಂತೆ ಒಂದೇ ದಿನ 30ಕ್ಕೂ ಹೆಚ್ಚು ಹಾರಗಳನ್ನು ಕುಮಾರಸ್ವಾಮಿ ಅವರಿಗೆ ಹಾಕಿ ಸ್ವಾಗತ ಕೋರಲಾಗಿತ್ತು.