ಬೆಂಗಳೂರು : ಹೊಸ ವರ್ಷ ಸಂಭ್ರಮಾಚರಣೆಗೆ ಕೌಂಟ್ ಡೌನ್ ಶುರುವಾಗಿದೆ. ಇಂದು ಸಂಜೆಯಿಂದಲೇ ಎಂ.ಜಿ.ರೋಡ್, ಬ್ರಿಗೇಡ್ ರೋಡ್ ಚರ್ಚ್ ಸ್ಟ್ರೀಟ್ ಸೇರಿ ಹಲವು ಭಾಗಗಳಲ್ಲಿ ಬಿಗ್ ಸೆಲೆಬ್ರೇಷನ್ ಗೆ ಯುವ ಸಮೂಹದ ದಂಡೇ ಸೇರುತ್ತೆ. ಅದ್ಧೂರಿ ಸಂಭ್ರಮಾಚರಣೆಗೆ ಬೆಂಗಳೂರು ಸಜ್ಜಾಗಿದ್ದು, ರಾಜಧಾನಿಯ ಮೂಲೆ ಮೂಲೆಯಲ್ಲೂ ಪೊಲೀಸರು ಹದ್ದಿನ ಕಣ್ಣಿಟ್ಟಿದ್ದಾರೆ.
ನಗರದಲ್ಲಿ ಭದ್ರತೆಗಾಗಿ 8,500ಕ್ಕೂ ಹೆಚ್ಚು ಪೊಲೀಸರ ನಿಯೋಜನೆ ಮಾಡಲಾಗಿದೆ. ಎಂ.ಜಿ.ರಸ್ತೆ, ಬ್ರಿಗೇಡ್ ರಸ್ತೆ, ರೆಸಿಡೆನ್ಸಿ ರಸ್ತೆಯಲ್ಲಿ ಬಂದೋಬಸ್ತ್ ಕೈಗೊಳ್ಳಲಾಗಿದ್ದು, ನಾಲ್ವರು ಡಿಸಿಪಿ, 10 ಎಸಿಪಿ ಸೇರಿ 3 ಸಾವಿರ ಸಿಬ್ಬಂದಿ ನಿಯೋಜನೆ ಮಾಡಲಾಗಿದೆ. ನಗರದಲ್ಲಿ 160 ಇನ್ಸ್ ಪೆಕ್ಟರ್, 600 ಪಿಎಸ್ ಐ, 800 ಎಎಸ್ ಐ, 1800 ಹೆಡ್ ಕಾನ್ಸ್ ಟೇಬಲ್, 5200 ಕಾನ್ಸ್ ಟೇಬಲ್ ಗಳ ನಿಯೋಜನೆ ಮಾಡಲಾಗಿದೆ.
ಬ್ರಿಗೇಡ್ ರಸ್ತೆ, ಚರ್ಚ್ ಸ್ಟ್ರೀಟ್ ಸೇರಿ ನಗರದೆಲ್ಲೆಡೆ 4,000 ಸಿಸಿಟಿವಿ ಅಳವಡಿಸಲಾಗಿದೆ. ರಾತ್ರಿ 1 ಗಂಟೆಯವರೆಗೆ ಮಾತ್ರ ಹೊಸ ವರ್ಷಾಚರಣೆಗೆ ಅವಕಾಶ ನೀಡಲಾಗಿದ್ದು, ಅವಧಿ ಮೀರಿ ಸಂಭ್ರಮಾಚರಣೆಯಲ್ಲಿ ತೊಡಗಿದವರ ವಿರುದ್ಧ ಪೊಲೀಸರು ಕ್ರಮ ಕೈಗೊಳ್ಳಲಿದ್ದಾರೆ. ಅಲ್ಲದೆ ಸುರಕ್ಷತೆಗಾಗಿ ವಾಚ್ಟವರ್ ಮತ್ತು ಮಹಿಳಾ ಸುರಕ್ಷತಾ ಕೊಠಡಿಗಳನ್ನು ಪೊಲೀಸರು ನಿರ್ಮಿಸಿದ್ದಾರೆ. ರಾತ್ರಿ 9ರ ನಂತ್ರ ಏರ್‌ಪೋರ್ಟ್ ಫ್ಲೈ ಓವರ್ ಹೊರತುಪಡಿಸಿ ಎಲ್ಲಾ ಫ್ಲೈಓವರ್‍ಗಳು ಬಂದ್ ಆಗಲಿದೆ. ರಾತ್ರಿ 9ರ ಬಳಿಕ ನೈಸ್ ರೋಡ್‍ನಲ್ಲಿ ದ್ವಿಚಕ್ರ ವಾಹನಗಳ ಓಡಾಟಕ್ಕೆ ನಿರ್ಬಂಧ ಹೇರಲಾಗಿದೆ.










