ಕೆರೆಯಲ್ಲಿ ಮುಳುಗಿ ಸಂಸದ ರಾಘವೇಂದ್ರರ ಫೋಟೋಗ್ರಾಫರ್ ಸಾವು…

54
firstsuddi

ರಾಮನಗರ : ಶಿವಮೊಗ್ಗ ಸಂಸದ ಬಿ.ವೈ. ರಾಘವೇಂದ್ರ ಅವರ ಫೋಟೋಗ್ರಾಫರ್ ಕೆರೆಯಲ್ಲಿ ಮುಳುಗಿ ಸಾವನ್ನಪ್ಪಿರುವ ಘಟನೆ ಜಿಲ್ಲೆಯ ಕನಕಪುರ ತಾಲೂಕಿನ ಮಾವತ್ತೂರಿನಲ್ಲಿ ನಡೆದಿದೆ. ಪ್ರಸನ್ನ ಭಟ್ ಮೃತ ವ್ಯಕ್ತಿ.

ಶಿವಮೊಗ್ಗ ಜಿಲ್ಲೆ ಹೊಸನಗರ ನಿವಾಸಿಯಾಗಿರುವ ಪ್ರಸನ್ನ ಭಟ್ (25) ನಿನ್ನೆ ಸಂಜೆ ಕನಕಪುರದ ಸ್ನೇಹಿತನ ಮನೆಗೆ ಬಂದಿದ್ದರು. ಸಂಜೆ ಈಜಾಡಲು ಎಂದು ಮಾವತ್ತೂರು ಕೆರೆಗೆ ತೆರಳಿದ್ದರು. ಈಜಾಡುವ ವೇಳೆ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ. ವಿಷಯ ತಿಳಿದು ಕನಕಪುರ ಗಾಮಾಂತರ ಪೊಲೀಸ್ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ದಯಾನಂದ ಸಾಗರ್ ಆಸ್ಪತ್ರೆಗೆ ರವಾನಿಸಲಾಗಿತ್ತು. ಕನಕಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಈ ಸಂಬಂಧ ಟ್ವೀಟ್ ಮಾಡಿರುವ ಸಂಸದರು, ಪಕ್ಷದ ಕಾರ್ಯಕ್ರಮಗಳಲ್ಲಿ ಸಕ್ರೀಯರಾಗಿ ಪಾಲ್ಗೊಳ್ಳುತ್ತಿದ್ದ ಸ್ನೇಹಜೀವಿ ಹಾಗೂ ನನ್ನ ಫೋಟೋಗ್ರಾಫರ್ ಆಗಿದ್ದ ಪ್ರಸನ್ನ ಭಟ್ ಅವರ ಅಕಾಲಿಕ ನಿಧನದ ಸುದ್ದಿಯಿಂದ ದುಃಖಿತನಾಗಿದ್ದೇನೆ. ದೇವರು ಅವರ ಆತ್ಮಕ್ಕೆ ಸದ್ಗತಿಯನ್ನು ಕರುಣಿಸಲಿ ಹಾಗೂ ಕುಟುಂಬಕ್ಕೆ ಈ ದುಃಖವನ್ನು ಭರಿಸುವ ಶಕ್ತಿಯನ್ನು ನೀಡಲಿ ಎಂದು ಪ್ರಾರ್ಥಿಸುತ್ತೇನೆ. ಓಂ ಶಾಂತಿ ಎಂದು ಬರೆದುಕೊಂಡಿದ್ದಾರೆ.