ವಿಧಾನಸೌಧದಲ್ಲಿ ಅನಧಿಕೃತವಾಗಿ ಸಾಗಾಟ ಮಾಡುತ್ತಿದ್ದ 10.5 ಲಕ್ಷ ರೂ. ಪೊಲೀಸರ ವಶಕ್ಕೆ…

51
firstsuddi

ಬೆಂಗಳೂರು: ವಿಧಾನಸೌಧದಲ್ಲಿ ಅನಧಿಕೃತವಾಗಿ ಸಾಗಾಟ ಮಾಡುತ್ತಿದ್ದ ಸುಮಾರು 10.5 ಲಕ್ಷ ರೂಪಾಯಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ನಿನ್ನೆ ಸಂಜೆ 7 ಗಂಟೆಗೆ ವಿಧಾನಸೌಧದ ಪಶ್ಚಿಮ ದ್ವಾರದ ಮೂಲಕ ಲೋಕೋಪಯೋಗಿ ಇಲಾಖೆಯ ಸಹಾಯಕ ಇಂಜಿನಿಯರ್ ಜಗದೀಶ್ ಎಂಬುವವರು ಅನಧಿಕೃತವಾಗಿ ಹಣ ಸಾಗಾಟ ಮಾಡುತ್ತಿದ್ದರು. ಗೇಟ್ ನಲ್ಲಿ ಪೊಲೀಸರು ಪರಿಶೀಲನೆ ಮಾಡಿದ ಸಂದರ್ಭದಲ್ಲಿ ಮಂಡ್ಯ ಮೂಲದ ಜಗದೀಶ್ ಬ್ಯಾಗ್ ನಲ್ಲಿ ದೊಡ್ಡ ಮೊತ್ತದ ಹಣ ಇರುವುದು ಪತ್ತೆಯಾಗಿದೆ.

ಆದರೆ ಹಣದ ಮೂಲದ ಕುರಿತಾಗಿ ಪೊಲೀಸರು ಪ್ರಶ್ನಿಸಿದಾಗ ಯಾವುದೇ ಸ್ಪಷ್ಟವಾದ ಮಾಹಿತಿಯನ್ನು ಈ ವ್ಯಕ್ತಿ ನೀಡಿಲ್ಲ. ಈ ಹಿನ್ನೆಲೆಯಲ್ಲಿ ಹಣವನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ. ಘಟನೆಗೆ ಸಂಬಂಧಿಸಿದಂತೆ ಎಫ್ಐಆರ್ ಕೂಡಾ ದಾಖಲಾಗಿದೆ. ಹಣ ಸಾಗಾಟ ಮಾಡುತ್ತಿದ್ದ ವ್ಯಕ್ತಿಯನ್ನು ವಿಧಾನಸೌಧ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಹಣದ ಮೂಲದ ಬಗ್ಗೆಯೂ ಯಾವುದೇ ಮಾಹಿತಿ ಲಭ್ಯವಾಗಿಲ್ಲ. ಇಷ್ಟು ದೊಡ್ಡ ಮೊತ್ತವನ್ನು ವಿಧಾನಸೌಧಕ್ಕೆ ತಂದಿದ್ದ ಉದ್ದೇಶ ಏನು? ಯಾರಿಗೆ ನೀಡಲು ಹಣವನ್ನು ತಂದಿದ್ದ ಎಂಬುದು ಸ್ಪಷ್ಟವಾಗಿಲ್ಲ. ಈ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.