ನಾಯಿಮರಿ ಹೇಳಿಕೆ- ವಿವಾದದ ಬೆನ್ನಲ್ಲೇ ಸ್ಪಷ್ಟನೆ ನೀಡಿದ ಸಿದ್ದರಾಮಯ್ಯ.

40
firstsuddi

ಮಂಗಳೂರು: ಸಿಎಂ ಬಸವರಾಜ ಬೊಮ್ಮಾಯಿ, ಪ್ರಧಾನಿ ನರೇಂದ್ರ ಮೋದಿ ಮುಂದೆ ನಾಯಿಮರಿ ರೀತಿ ಇರುತ್ತಾರೆ ಎಂಬ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿಕೆ ರಾಜ್ಯ ರಾಜಕಾರಣದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ. ಇದೀಗ ಈ ವಿವಾದದ ಬಗ್ಗೆ ಪ್ರತಿಕ್ರಿಯಿಸಿರುವ ಸಿದ್ದರಾಮಯ್ಯ ನಾನು ಸಿಎಂ ಅವರನ್ನು ನಾಯಿ ಅಂತ ಕರೆದಿಲ್ಲ ಆದರೆ ಕೇಂದ್ರದಿಂದ ಅನುದಾನ ತರಲು ಧೈರ್ಯ ಇರಬೇಕು ಎಂದು ಹೇಳಿದ್ದೇನೆ ಎಂದು ಸ್ಪಷ್ಟನೆ ನೀಡಿದರು.

ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು ನನ್ನನ್ನು ಟಗರು, ಹುಲಿಯಾ ಎಂದು ಕರೆಯುತ್ತಾರೆ, ಯಡಿಯೂರಪ್ಪ ಅವರನ್ನು ರಾಜಾ ಹುಲಿ ಎಂದು ಅವರ ಪಕ್ಷದವರೇ ಕರೆಯುತ್ತಾರೆ ಹಾಗಾದರೆ ಯಡಿಯೂರಪ್ಪ ಅವರು ಹುಲಿಯಾ? ಹಾಗೆಯೇ ನಾಯಿ ಒಂದು ನಂಬಿಕಸ್ಥ ಪ್ರಾಣಿ ಆದ್ದರಿಂದ ನಾಯಿಯ ರೀತಿಯ ಧೈರ್ಯದಿಂದ ಕೇಂದ್ರದಿಂದ ಪಾಲು ತೆಗೆದುಕೊಳ್ಳಬೇಕು ಎಂದು ಹೇಳಿದ್ದೇನೆ. ರಾಜ್ಯದ ಸಮಸ್ಯೆಗಳ ಬಗ್ಗೆ ಕೇಂದ್ರ ಸರ್ಕಾರದ ಜೊತೆ ಮಾತನಾಡುವ ಧೈರ್ಯ ರಾಜ್ಯದ ಮುಖ್ಯಮಂತ್ರಿಗೆ ಇರಬೇಕು. ರಾಜ್ಯಕ್ಕೆ ಬರಬೇಕಾದ ಅನುದಾನ ತರಬೇಕು, ನಾಯಿಮರಿ ತರ ಇರಬಾರದೆಂದು ಹೇಳಿದ್ದೇನಷ್ಟೇ ಎಂದರು.

ಚುನಾವಣೆಗೆ ಕ್ಷೇತ್ರ ಆಯ್ಕೆ ವಿಚಾರವಾಗಿ ಅವರು ಪ್ರತಿಕ್ರಿಯೆ ನೀಡಿದ್ದು, ನಾನು ಅಲೆಮಾರಿ ರಾಜಕಾರಣಿ ಅಲ್ಲ. ಜನ ಕೋಲಾರ, ಬಾದಾಮಿ, ವರುಣ ಕ್ಷೇತ್ರದಿಂದ ಕರೆಯುತ್ತಾರೆ. ನಾನು ಅರ್ಜಿ ಹಾಕುವಾಗ ಹೈಕಮಾಂಡ್ ಗೆ ಬಿಟ್ಟಿದ್ದು ಅಂತಾ ಹೇಳಿದ್ದೇನೆ ಎಂದರು.

ವಿಧಾನಸೌಧದಲ್ಲಿ ಅನಧಿಕೃತವಾಗಿ 10.5 ಲಕ್ಷ ಹಣ ಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿದ್ದು, ಈ ರೀತಿ ಸಾಕಷ್ಟು ಪ್ರಕರಣ ನಡೆದಿದೆ. ರಾಜ್ಯದಲ್ಲಿರುವುದು 40% ಸರ್ಕಾರವೆಂದು ಗುತ್ತಿಗೆದಾರರ ಸಂಘ ಹೇಳಿದೆ. ಕೆ.ಎಸ್.ಈಶ್ವರಪ್ಪಗೆ ಲಂಚ ಕೊಡಲಾಗದೆ ಗುತ್ತಿಗೆದಾರ ಸಂತೋಷ್ ಪಾಟೀಲ್ ಆತ್ಮಹತ್ಯೆ ಮಾಡಿಕೊಂಡ. ನನ್ನ ಸಾವಿಗೆ ಈಶ್ವರಪ್ಪ ಕಾರಣವೆಂದು ಡೆತ್​ನೋಟ್ ಸಹ ಬರೆದಿಟ್ಟಿದ್ದ. ಅದೇ ರೀತಿಯಾಗಿ ಇತ್ತೀಚಿಗೆ ತುಮಕೂರು ಜಿಲ್ಲೆ ದೇವರಾಯನದುರ್ಗದ ಐಬಿಯಲ್ಲಿ ಗುತ್ತಿಗೆದಾರ ಪ್ರಸಾದ್ ಕೂಡ ಆತ್ಮಹತ್ಯೆಗೆ ಶರಣಾಗಿದ್ದಾರೆ. ಇನ್ನು ಗುತ್ತಿಗೆದಾರ ಶಿವಕುಮಾರ್ ಎಂಬುವರು ದಯಾಮರಣ ಕೇಳಿದ್ದಾರೆ. ಇವೆಲ್ಲ ನೋಡುತ್ತಿದ್ದರೆ ಈ ಸರ್ಕಾರದಲ್ಲಿ ಭ್ರಷ್ಟಾಚಾರ ಬಿಟ್ಟರೆ ಬೇರೇನೂ ನಡೆಯುತ್ತಿಲ್ಲ. ಅಧಿಕಾರಿಗಳ ವರ್ಗಾವಣೆ, ಪೋಸ್ಟಿಂಗ್ ಗೆ ಹಣ ಕೇಳುತ್ತಿದ್ದಾರೆ ಎಂದು ಹರಿಹಾಯ್ದರು.

ರಸ್ತೆ ಗುಂಡಿ, ಚರಂಡಿ ಬಗ್ಗೆ ಮಾತಾಡಬೇಡಿ, ಲವ್ ಜಿಹಾದ್ ಬಗ್ಗೆ ಮಾತಾಡಿ ಎಂದು ನಳಿನ್ ಕುಮಾರ್ ಕಟೀಲ್ ಹೇಳಿಕೆಗೆ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, ನಳಿನ್ ಕುಮಾರ್ ಕಟೀಲ್ ಒಬ್ಬ ಜೋಕರ್ ಇದ್ದಂತೆ. ಅವರ ಬಗ್ಗೆ ಪ್ರತಿಕ್ರಿಯೆ ನೀಡುವುದಿಲ್ಲ. ಕಾನೂನು ಜ್ಞಾನ ಇಲ್ಲದೆ ಮಾತನಾಡುತ್ತಾರೆ. ಆ ಕಾರಣದಿಂದ ನನ್ನನ್ನು ಜೈಲಿಗೆ ಕಳುಹಿಸಿಸುತ್ತೇನೆ ಎನ್ನುತ್ತಾರೆ. ಜೈಲಿಗೆ ಕಳುಹಿಸುವ ಕೆಲಸ ನ್ಯಾಯಾಲಯ ಮಾಡುತ್ತದೆ ಎಂದರು.