ಭಟ್ಕಳದಲ್ಲಿ ಬಾಂಬ್ ಸ್ಫೋಟಿಸುವುದಾಗಿ ಬೆದರಿಕೆ ಪತ್ರ – ಚೆನ್ನೈನಲ್ಲಿ ಆರೋಪಿಯ ಬಂಧನ…

34
firstsuddi

ಉತ್ತರ ಕನ್ನಡ: ಭಟ್ಕಳದಲ್ಲಿ ಬಾಂಬ್ ಸ್ಫೋಟ ಮಾಡುವುದಾಗಿ ಪೊಲೀಸ್ ಠಾಣೆಗೆ ಬೆದರಿಕೆ ಪತ್ರ ಬಂದಿದ್ದು, ಈ ಸಂಬಂಧ ಆರೋಪಿಯನ್ನು ಚೆನ್ನೈನಲ್ಲಿ ಪೊಲೀಸರು ಬಂಧಿಸಿದ್ದಾರೆ. ಹೊಸಪೇಟೆ ಮೂಲದ ಹನುಮಂತಪ್ಪ ಬಂಧಿತ ಆರೋಪಿಯಾಗಿದ್ದು, ಇದೊಂದು ಹುಸಿ ಬೆದರಿಕೆ ಪತ್ರ ಎಂಬುದು ಪೊಲೀಸರಿಗೆ ತನಿಖೆ ಸಂದರ್ಭದಲ್ಲಿ ತಿಳಿದುಬಂದಿದೆ.

ಉತ್ತರ ಕನ್ನಡ ಜಿಲ್ಲೆಯ ಭಟ್ಕಳದ ಪೊಲೀಸ್ ಠಾಣೆಗೆ 2022ರ ಡಿ. 31ರಂದು ಪತ್ರವೊಂದು ಬಂದಿತ್ತು. ಆ ಪತ್ರದಲ್ಲಿ ಚೆನ್ನೈ ಕಲೆದಾ- ನೆಕ್ಸ್ಟ್ ಟಾರ್ಗೆಟ್ ಡಿ. 25 ಆಂಡ್ ಹ್ಯಾಪಿ ನ್ಯೂ ಇಯರ್ 2023 ಬಾಂಬ್ ಬ್ಲಾಸ್ಟ್ ಎಂದು ಉಲ್ಲೇಖಿಸಲಾಗಿತ್ತು. ಇಂಗ್ಲಿಷ್ ಅಕ್ಷರಗಳಲ್ಲಿ ಬರೆದ ಹುಸಿ ಬಾಂಬ್ ಸ್ಫೋಟದ ಬೆದರಿಕೆ ಪತ್ರ ಭಟ್ಕಳ ಪೊಲೀಸ್ ಠಾಣೆಗೆ ತಲುಪುತ್ತಿದ್ದಂತೆ ಎಚ್ಚೆತ್ತ ಪೊಲೀಸರು, ಸೂಕ್ಷ್ಮ ಪ್ರಕರಣವನ್ನು ಸದ್ದಿಲ್ಲದೆ ತನಿಖೆ ನಡೆಸುತ್ತಿದ್ದರು.

ಇತ್ತ ಇದೇ ರೀತಿಯ ಬೆದರಿಕೆ ಪತ್ರವು ತಮಿಳುನಾಡಿನ ಚೆನ್ನೈ ಪೊಲೀಸರಿಗೂ ಬಂದಿತ್ತು. ಈ ಹಿನ್ನೆಲೆಯಲ್ಲಿ ಆರೋಪಿ ಪತ್ತೆಗಾಗಿ ಚೆನ್ನೈ ಪೊಲೀಸರು ಕಾರ್ಯಮುಖರಾಗಿದ್ದಾರೆ. ಈ ವೇಳೆ ಅಂತರಾಜ್ಯ ಕಳ್ಳ ಹೊಸಪೇಟೆಯ ಕಮಲಾಪುರದ ಹನುಮಂತಪ್ಪ ಲ್ಯಾಪ್‌ಟಾಪ್‌ವೊಂದನ್ನು ಕದ್ದು ಚೆನ್ನೈನ ಅಂಗಡಿಯೊಂದರಲ್ಲಿ ಮಾರಾಟ ಮಾಡಲು ಹೋಗಿದ್ದ. ಇದರಿಂದ ಅನುಮಾನಗೊಂಡ ಅಂಗಡಿಯಾತ ಲ್ಯಾಪ್‌ಟಾಪ್‌ ನ ಪಾಸ್‌ವರ್ಡ್‌ ಕೇಳಿದಾಗ ಆತ ತಡಬಡಿಸಿದ್ದಾನೆ. ಈ ಹಿನ್ನೆಲೆಯಲ್ಲಿ ಅಂಗಡಿಯಾತ ಪೊಲೀಸರಿಗೆ ಮಾಹಿತಿ ನೀಡಿದ್ದಾನೆ. ಅದಾದ ಬಳಿಕ ಪೊಲೀಸರು ಹನುಮಂತಪ್ಪನನ್ನು ಬಂಧಿಸಿದ್ದರು. ಈ ವೇಳೆ ತನಿಖೆ ಮಾಡುವಾಗ ಹನುಮಂತಪ್ಪನೇ ಬೆದರಿಕೆ ಪತ್ರ ಬರೆದಿರುವುದು ತಿಳಿದುಬಂದಿದೆ.

ಸದ್ಯ ಬಂಧಿತ ಆರೋಪಿಯನ್ನು ಚೆನ್ನೈ ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದು, ಚೆನ್ನೈನಿಂದ ಭಟ್ಕಳಕ್ಕೆ ಕರೆತಂದು ತನಿಖೆ ನಡೆಸಲು ಪೊಲೀಸರು ಸಿದ್ಧತೆ ನಡೆಸುತ್ತಿದ್ದಾರೆ ಎಂದು ಪೊಲೀಸ್ ಮೂಲಗಳಿಂದ ಮಾಹಿತಿ ತಿಳಿದುಬಂದಿದೆ.