ಬೆಂಗಳೂರು : ರಾಜಾಜಿನಗರದಲ್ಲಿರುವ ಎನ್ಪಿಎಸ್ ಶಾಲೆಗೆ ಬಾಂಬ್ ಬೆದರಿಕೆ ಇ-ಮೇಲ್ ಸಂದೇಶ ಬಂದಿದೆ. ಈ ಹಿನ್ನೆಲೆ ಶಾಲಾ ಆಡಳಿತ ಮಂಡಳಿ ನೀಡಿದ ದೂರಿನ ಮೇರೆಗೆ ಸ್ಥಳಕ್ಕೆ ಬಂದು ಪೊಲೀಸರು ತಪಾಸಣೆ ನಡೆಸಿದ ಬಳಿಕ ಹುಸಿ ಬಾಂಬ್ ಬೆದರಿಕೆ ಗೊತ್ತಾಗುತ್ತಿದ್ದಂತೆ ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ.
ಶಾಲೆ ಆವರಣದಲ್ಲಿ 4 ಜಿಲೇಟಿನ್ ಕಡ್ಡಿ ಇಟ್ಟಿರುವುದಾಗಿ ಇ-ಮೇಲ್ ಬಂದಿದೆ. ಬೆಳಗ್ಗೆ 11.30 ಮೇಲ್ ನೋಡಿದ ತಕ್ಷಣ ಶಾಲಾ ಆಡಳಿತ ಮಂಡಳಿ ಬಸವೇಶ್ವರನಗರ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಬಸವೇಶ್ವರನಗರ, ರಾಜಾಜಿನಗರ ಠಾಣೆ ಪೊಲೀಸರ ಭೇಟಿ ನೀಡಿದ್ದಾರೆ. ಅಲ್ಲದೇ ಬಾಂಬ್ ನಿಷ್ಕ್ರಿಯ ದಳ, ಶ್ವಾನ ದಳದಿಂದ ಶಾಲೆಯಲ್ಲಿ ಪರಿಶೀಲನೆ ನಡೆಸಿದ್ದಾರೆ. ತಪಾಸಣೆ ನಂತರ ಹುಸಿ ಬೆದರಿಕೆ ಇ-ಮೇಲ್ ಎಂಬುದು ದೃಢವಾಗಿದೆ.
ಸದ್ಯ ವಿದ್ಯಾರ್ಥಿಗಳನ್ನು ಸುರಕ್ಷಿತ ಸ್ಥಳಕ್ಕೆ ರವಾನೆ ಮಾಡಲಾಗಿದ್ದು, ಈ ಸಂಬಂಧ ಬಸವೇಶ್ವರ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ. ಘಟನೆ ಕುರಿತಂತೆ ಪೊಲೀಸರು ತನಿಖೆ ಆರಂಭ ಮಾಡಿದ್ದು, ಮೇಲ್ ಎಲ್ಲಿಂದ ಬಂದಿದೆ ಎಂಬ ಬಗ್ಗೆ ಮಾಹಿತಿ ಕಲೆ ಹಾಕುತ್ತಿದ್ದಾರೆ.
ಇನ್ನು ಈ ಬಗ್ಗೆ ಮಾಧ್ಯಮಗಳಿಗೆ ಪ್ರಕ್ರಿಯೆ ನೀಡಿದ ಪಶ್ಚಿಮ ವಿಭಾಗ ಡಿಸಿಪಿ ಲಕ್ಷ್ಮಣ ನಿಂಬರಗಿ, ನಿನ್ನೆ ರಾತ್ರಿ 8:30 ಸುಮಾರಿಗೆ ಮೇಲ್ ಬಂದಿದೆ. ಜಿಲೇಟಿನ್ ಕಡ್ಡಿ ಇಟ್ಟು ಬ್ಲಾಸ್ಟ್ ಮಾಡೋದಾಗಿ ಮೇಲ್ ಬಂದಿದೆ. ಬೆಳಗ್ಗೆ ಮೇಲ್ ಚೆಕ್ ಮಾಡಿದ್ದಾರೆ. ಪ್ರೋಟೋಕಾಲ್ ಪ್ರಕಾರ ನಾವು ಬೆಳಗ್ಗೆ ಬಂದು ಎಲ್ಲಾ ಚೆಕ್ ಮಾಡಿದ್ದೀವಿ. ಮಕ್ಕಳನ್ನು ಸುರಕ್ಷಿತ ಸ್ಥಳಕ್ಕೆ ಕಳಿಸಿದ್ದೇವೆ. ಇದೊಂದು ಹುಸಿ ಬಾಂಬ್ ಬೆದರಿಕೆ ಇ ಮೇಲ್ ಆಗಿದ್ದು, ಇದೀಗ ಎಲ್ಲಾ ಪರಿಶೀಲನೆ ಮಾಡುತ್ತಿದ್ದೇವೆ ಎಂದು ಸ್ಪಷ್ಟಪಡಿಸಿದರು.










