ಉಡುಪಿ : ಜಿಲ್ಲೆಯ ಕಾಪು ತಾಲೂಕು ಪಡುಬಿದ್ರಿಯಲ್ಲಿ ಕಾಂತಾರ ಸಿನಿಮಾ ಮಾದರಿಯ ಘಟನೆಯೊಂದು ನಡೆದಿದೆ. 500 ವರ್ಷ ಇತಿಹಾಸ ಇರುವ ಪಡುಹಿತ್ಲು ಜಾರಂದಾಯ ದೈವಸ್ಥಾನದ ವಿರುದ್ಧ ಇದೇ ಮೊದಲ ಬಾರಿ ವ್ಯಕ್ತಿಯೊಬ್ಬ ಕೋರ್ಟ್ ಮೆಟ್ಟಿಲೇರಿದ್ದ. ಕೋರ್ಟ್ ನಿಂದ ತಡೆಯಾಜ್ಞೆ ತಂದ ಮರುದಿನವೇ ಆತ ಕುಸಿದು ಬಿದ್ದು ಸಾವನ್ನಪ್ಪಿದ್ದು ,ದೈವದ ಶಕ್ತಿಗೆ ಊರವರು ತಲೆದೂಗಿದ್ದಾರೆ.
ಪಡುಹಿತ್ಲು ಜಾರಂದಾಯ ದೇವಸ್ಥಾನವನ್ನು ಬಂಟ ಸೇವಾ ಸಮಿತಿ ನೋಡಿಕೊಳ್ಳುತ್ತಿತ್ತು. ಸೇವಾ ಸಮಿತಿ ಸದಸ್ಯರು ಬದಲಾದ ನಂತರ ಇಲ್ಲಿ ಘರ್ಷಣೆ ಆರಂಭವಾಗಿದೆ. ದೇವಸ್ಥಾನದ ವಿಚಾರವಾಗಿ ಅಧಿಕಾರ ಕಳೆದುಕೊಂಡ ನಂತರ ಪ್ರಕಾಶ್ ಶೆಟ್ಟಿ ಅವರು ನಂತರ ಪ್ರತ್ಯೇಕ ಟ್ರಸ್ಟ್ ರಚಿಸಿದ್ದಾರೆ. ದೈವಸ್ಥಾನದ ಗುರಿಕಾರರಾದ ಜಯ ಪೂಜಾರಿ ಅವರನ್ನು ಟ್ರಸ್ಟ್ ಅಧ್ಯಕ್ಷರಾಗಿ ನೇಮಸಿತ್ತು. ಈ ಮೂಲಕ ದೈವಸ್ಥಾನದ ಮೇಲೆ ಹಕ್ಕು ಸ್ಥಾಪಿಸಲು ಪ್ರಯತ್ನಿಸಿದ್ದಾರೆ.
ಪ್ರತಿವರ್ಷದಂತೆ ಈ ವರ್ಷ ನೇಮೋತ್ಸವ ನಡೆಸಲು ಜಾರಂದಾಯ ದೈವಸ್ಥಾನ ಸಮಿತಿ ತೀರ್ಮಾನಿಸಿ ,ಜನವರಿ 7 ರಂದು ಕೋಲ ನಡೆಸಲು ತೀರ್ಮಾನಿಸುತ್ತದೆ. ಇದರ ವಿರುದ್ಧ ನ್ಯಾಯಾಲಯದ ಮೆಟ್ಟಿಲೇರುವ ಜಯಪೂಜಾರಿ ಮತ್ತು ಪ್ರಕಾಶ್ ಶೆಟ್ಟಿ ಕೋಲಕ್ಕೆ ತಡೆಯಾಜ್ಞೆ ತರುವಲ್ಲಿ ಯಶಸ್ವಿಯಾಗ್ತಾರೆ. ಆಶ್ಚರ್ಯದ ಸಂಗತಿ ಎಂದರೆ ಡಿಸೆಂಬರ್ 23 ಕ್ಕೆ ತಡೆಯಾಜ್ಞೆ ತಂದ ಜಯಪೂಜಾರಿ, ಡಿಸೆಂಬರ್ 24 ರಂದು ಹಠಾತ್ ಕುಸಿದು ಬಿದ್ದು ಸಾವನ್ನಪ್ಪುತ್ತಾರೆ. ಈ ಪ್ರಕರಣವನ್ನು ಕೈಗೆತ್ತಿಕೊಂಡ ಖ್ಯಾತ ವಕೀಲ ಬಿ.ನಾಗರಾಜ್ ,ತಡೆಯಾಜ್ಞೆಯನ್ನು ವೆಕೇಟ್ ಮಾಡುವಲ್ಲಿ ಯಶಸ್ವಿಯಾಗುತ್ತಾರೆ.
ಇಷ್ಟಕ್ಕೂ ಸುಮ್ಮನಿರದ ಟ್ರಸ್ಟಿ ಪ್ರಕಾಶ್ ಶೆಟ್ಟಿ ಬೇರೆ ಬೇರೆ ರೀತಿಯಲ್ಲಿ ಕಿರುಕುಳ ನೀಡುತ್ತಾರೆ. ಕೊನೆಗೆ ಜಾರಂದಾಯ ದೈವಸ್ಥಾನದ ದೈವ ನರ್ತಕ ಭಾಸ್ಕರ ಬಂಗೇರ ಅವರನ್ನು ಬೆದರಿಸಿ ತಾವು ಹೇಳುವ ರೀತಿ ದೈವದ ನುಡಿ ಕೊಡಬೇಕು ಎಂದು ಬೆದರಿಸಿತ್ತಾರೆ.
ಜನವರಿ 7 ಕ್ಕೆ ನಡೆಯಬೇಕಿದ್ದ ನೇಮೋತ್ಸವವನ್ನು ದೈವಸ್ಥಾನ ಸಮಿತಿ ಜಯಪೂಜಾರಿ ದೈವದೀನರಾದ ಕಾರಣಕ್ಕೆ ಮುಂದೂಡಿದೆ. ಆದರೆ ಹಠ ಬಿಡದ ಪ್ರಕಾಶ್ ಶೆಟ್ಟಿ ಮತ್ತು ತಂಡ ಜಯ ಪೂಜಾರಿಯವರ ಉತ್ತರಕ್ರಿಯೆಯ ದಿನವಾದ ಜ.7 ರಂದೇ ಕಾಲಾವಧಿ ನೇಮೋತ್ಸವ ಮಾಡಲು ಹೊರಟಿದೆ. ಕೋರ್ಟ್ ನಲ್ಲಿ ತಡೆಯಾಜ್ಞೆ ತೆರವಾಗಿದ್ದರೂ ಊರವರ ವಿರುದ್ಧ ಹೊರಟಿರುವ ಪ್ರಕಾಶ್ ಶೆಟ್ಟಿ ಮತ್ತು ತಂಡದ ವಿರುದ್ಧ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. ಇದೀಗ ಊರ ಸಮಸ್ತರು ಸಭೆ ಸೇರಿ 500 ವರ್ಷಗಳ ಇತಿಹಾಸ ಇರುವ ಜಾರಂದಾಯ ಬಂಟ ಸೇವಾ ಸಮಿತಿ ಮಾಡುವ ನಿರ್ಣಯಕ್ಕೆ ಬದ್ಧ ಎಂಬ ತೀರ್ಮಾನಕ್ಕೆ ಬಂದಿದ್ದಾರೆ.










