ನಿರ್ಮಾಣ ಹಂತದ ಮೆಟ್ರೋ ಪಿಲ್ಲರ್ ಕುಸಿದು ತಾಯಿ-ಮಗು ದುರ್ಮರಣ…

51
firstsuddi

ಬೆಂಗಳೂರು : ನಿರ್ಮಾಣ ಹಂತದ ಮೆಟ್ರೋ ಪಿಲ್ಲರ್ ಕುಸಿದು ಬಿದ್ದ ಪರಿಣಾಮ ಮಹಿಳೆ ಮತ್ತು ಆಕೆಯ ಎರಡೂವರೆ ವರ್ಷದ ಮಗು ಸಾವನ್ನಪ್ಪಿರುವ ಘಟನೆ ಬೆಂಗಳೂರಿನ ನಾಗವಾರ ರಿಂಗ್ ರಸ್ತೆಯ ಹೆಚ್‍ಬಿಆರ್ ಲೇಔಟ್‍ನಲ್ಲಿ ನಡೆದಿದೆ. ಬೆಳಗ್ಗೆ 10:30 ರ ಸುಮಾರಿಗೆ ಘಟನೆ ನಡೆದಿದ್ದು, ಮೃತರನ್ನು ತೇಜಸ್ವಿನಿ (28) ಹಾಗೂ ಎರಡೂವರೆ ವರ್ಷದ ಮಗು ವಿಹಾನ್ ಎಂದು ಗುರುತಿಸಲಾಗಿದೆ.

ತೇಜಸ್ವಿನಿ ಅವರು ಮಾನ್ಯತಾ ಟೆಕ್ ಪಾರ್ಕ್ ನಲ್ಲಿ ಕೆಲಸ ಮಾಡುತ್ತಿದ್ದರು. ಪತ್ನಿ ತೇಜಸ್ವಿನಿಯನ್ನು ಕೆಲಸಕ್ಕೆ ಬಿಟ್ಟು ನಂತರ ತನ್ನ ಇಬ್ಬರು ಮಕ್ಕಳನ್ನು ಬೇಬಿ ಸಿಟ್ಟಿಂಗ್ ಶಾಲೆಗೆ ಬಿಡಲು ಲೋಹಿತ್ ಕುಮಾರ್ ತೆರಳುತ್ತಿದ್ದರು. ಈ ವೇಳೆ ಏಕಾಏಕಿ ಹೆಣ್ಣೂರು ಬಳಿ ನಿರ್ಮಾಣ ಹಂತದ ಮೆಟ್ರೋ ಪಿಲ್ಲರ್ ಮೈಮೇಲೆ ಬಿದ್ದ ಪರಿಣಾಮ ತೇಜಸ್ವಿನಿ, ಗಂಡು ಮಗು ವಿಹಾನ್ ಗಂಭೀರವಾಗಿ ಗಾಯಗೊಂಡಿದ್ದರು. ತಕ್ಷಣವೇ ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತಾದರೂ ತಾಯಿ ಮತ್ತು ಮಗು ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ.

ಲೋಹಿತ್ ಕುಮಾರ್‌ ಹಾಗೂ ಹೆಣ್ಣು ಮಗು ಗಂಭೀರವಾಗಿ ಗಾಯಗೊಂಡಿದ್ದು, ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಮುಂದುವರೆದಿದೆ‌ ಎಂದು ಡಿಸಿಪಿ ಡಾ.ಭೀಮಾಶಂಕರ್ ಎಸ್ ಗುಳೇದ್ ತಿಳಿಸಿದ್ದಾರೆ.

ನಿರ್ಮಾಣ ಹಂತದ ಮೆಟ್ರೋ ಪಿಲ್ಲರ್ ಕುಸಿದು ಮೃತಪಟ್ಟ ತೇಜಸ್ವಿನಿ ಕುಟುಂಬಕ್ಕೆ 20 ಲಕ್ಷ ಪರಿಹಾರ ನೀಡುವುದಾಗಿ ಬಿಎಂಆರ್‌ಸಿಎಲ್‌ ಎಂಡಿ ಅಜ್ಜುಂ ಪರ್ವೇಜ್ ಘೋಷಿಸಿದರು.

ಘಟನೆಗೆ ಸಂಬಂಧಿಸಿದಂತೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಅವರು, 18 ಮೀ. ಎತ್ತರದ ಪಿಲ್ಲರ್ ಬಿದ್ದಿದೆ. ಘಟನೆಯಲ್ಲಿ ತಾಯಿ, ಮಗು ಮೃತಪಟ್ಟಿದೆ. ಈ ಬಗ್ಗೆ ಎಲ್ಲಾ ಇಂಜಿನಿಯರ್ ಜೊತೆಗೆ ಮಾತಾಡುತ್ತೇನೆ. ಇಂಡಿಯನ್ ಇನ್ಸ್ಟಿಟ್ಯೂಟ್ ಸೈನ್ಸ್‌ಗೆ ಮನವಿ ಮಾಡುತ್ತೇವೆ. ಅವರು ಬಂದು ಪರಿಶೀಲನೆ ನಡೆಸುತ್ತಾರೆ. ಜೊತೆಗೆ ಚೀಫ್‌ ಎಂಜಿನಿಯರ್, ಕಂಟ್ರ್ಯಾಕ್ಟರ್ ನೋಟಿಸ್ ಕೊಡುತ್ತೇವೆ ಎಂದು ತಿಳಿಸಿದರು.