ಶೀಘ್ರವೇ ಸ್ಯಾಂಟ್ರೋ ರವಿಯನ್ನ ಬಂಧಿಸ್ತೇವೆ : ಆರಗ ಜ್ಞಾನೇಂದ್ರ.

57
firstsuddi

ಬೆಂಗಳೂರು : ಸ್ಯಾಂಟ್ರೋ ರವಿ ಚಲನವಲಗಳ ಮೇಲೆ ನಿಗಾ ಇಡುವ ಕೆಲಸ ಆಗ್ತಿದೆ. ಈಗಾಗಲೇ ಅವರ ಹಿಂಬಾಲಕರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗ್ತಿದೆ. ಸ್ಯಾಂಟ್ರೋ ರವಿ ಬಂಧನಕ್ಕೆ ವಿಶೇಷ ತಂಡ ರಚನೆ ಮಾಡಲಾಗಿದ್ದು, ಶೀಘ್ರವೇ ಬಂಧಿಸಲಾಗುವುದು ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಅವರು ತಿಳಿಸಿದ್ದಾರೆ.

ನಗರದಲ್ಲಿ ಮಾತನಾಡಿದ ಅವರು, ಆತನ ಮೇಲೆ ಇರುವ ಎಲ್ಲಾ ಕೇಸ್ ಗಳ ಬಗ್ಗೆ ತನಿಖೆ ಮಾಡ್ತೀವಿ ಎಂದರು. ಮಹಿಳೆ ಮೇಲೆ ಪೊಲೀಸರೇ ಸುಳ್ಳು ಕೇಸ್ ದಾಖಲು ಮಾಡಿರುವ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಸಚಿವರು, ಸುಳ್ಳು ಕೇಸ್ ಹಾಕಿ ಬಂಧನ ಮಾಡಿರೋದು ಗೊತ್ತಾಗಿದೆ. ಈಗಾಗಲೇ ವರದಿ ರೆಡಿ ಆಗಿದೆ. ಈ ಸಂಬಂಧ ಕಾನೂನು ಕ್ರಮ ಆಗುತ್ತೆ. ಯಾವ ಅಧಿಕಾರಿ ಇದ್ದರೂ ಅವರ ವಿರುದ್ಧ ಕ್ರಮ ಆಗುತ್ತೆ ಎಂದರು.

ಆರಗ ಜ್ಞಾನೇಂದ್ರ ಮನೆಯಲ್ಲಿ ಹುಡುಕಿದ್ರೆ ಸ್ಯಾಂಟ್ರೋ ರವಿ ಸಿಗಬಹುದು ಎಂಬ ಕಾಂಗ್ರೆಸ್ ಟ್ವೀಟ್ ಗೆ ತಿರುಗೇಟು ನೀಡಿದ ಸಚಿವರು, ಇದು ಚುನಾವಣೆ ಸಂದರ್ಭ. ಹೀಗಾಗಿ ಕಾಂಗ್ರೆಸ್ ಚುನಾವಣೆಗೆ ಹೀಗೆ ಮಾತಾಡ್ತಿದೆ. ನಾನು ಕೂಡ ಡಿ.ಕೆ.ಶಿವಕುಮಾರ್, ಸಿದ್ದರಾಮಯ್ಯ ಮನೆಯಲ್ಲಿ ಹುಡುಕಿದರೆ ಸಿಗಬಹುದು ಅಂತ ಹೇಳಬಹುದು. ಆದರೆ ಇದು ಜವಾಬ್ದಾರಿಯುತ ಮಾತಲ್ಲ. ಎಂದು ಹೇಳಿದರು.

ಸರ್ಕಾರವೇ ಸ್ಯಾಂಟ್ರೋ ರವಿಯನ್ನ ಬಚ್ಚಿಟ್ಟಿದೆ ಎಂಬ ಕುಮಾರಸ್ವಾಮಿ ಆರೋಪಕ್ಕೆ ಪ್ರತಿಕ್ರಿಯಿಸಿ, ಕುಮಾರಸ್ವಾಮಿ ಮಾತಿಗೆ ನಾನು ಏನು ಹೇಳುವುದಿಲ್ಲ. ಪೊಲೀಸರು ಪ್ರಾಮಾಣಿಕವಾಗಿ ತನಿಖೆ ಮಾಡ್ತಿದ್ದಾರೆ. ಸ್ಯಾಂಟ್ರೋ ರವಿ ಬಂಧನ ಮಾಡೋಕೆ ಎಲ್ಲಾ ಪ್ರಯತ್ನ ಮಾಡ್ತಿದ್ದಾರೆ. ಅತಿ ಶೀಘ್ರವೇ ಬಂಧನ ಆಗುತ್ತೆ ಎಂದು ಸ್ಪಷ್ಟಪಡಿಸಿದ್ದಾರೆ.