ತಾಷ್ಕೆಂಟ್ : ಉಜ್ಬೇಕಿಸ್ತಾನ್ ನಲ್ಲಿರುವ ಮಕ್ಕಳಿಗೆ ನೋಯ್ಡಾ ಮೂಲದ ಕಂಪನಿ ಮರಿಯನ್ ಬಯೋಟೆಕ್ ತಯಾರಿಸಿದ ಎರಡು ಕೆಮ್ಮಿನ ಸಿರಪ್ ಗಳನ್ನು ಬಳಸಬಾರದು ಎಂದು ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್ ಒ) ಶಿಫಾರಸು ಮಾಡಿದೆ.
ಮರಿಯನ್ ಬಯೋಟೆಕ್ ಪ್ರೈವೇಟ್ ಲಿಮಿಟೆಡ್ ಸಂಸ್ಥೆ ತಯಾರಿಸಿರುವ ಅಬ್ರೊನಾಲ್ ಮತ್ತು ಡಾಕ್-1 ಮ್ಯಾಕ್ಸ್ ಕೆಮ್ಮು ಸಿರಪ್ ತೆಗೆದುಕೂಳ್ಳದಂತೆ ಡಬ್ಲ್ಯುಎಚ್ ಒ ಸೂಚಿಸಿದೆ. ಇಲ್ಲಿಯವರೆಗೆ ಔಷಧಿಯ ಗುಣಮಟ್ಟ ಮತ್ತು ಸುರಕ್ಷತೆಗೆ ಸಂಬಂಧಿಸಿದಂತೆ ಮರಿಯನ್ ಬಯೋಟೆಕ್ ಯಾವುದೇ ಖಾತ್ರಿಯನ್ನು ನೀಡಿಲ್ಲ ಎಂದು ಉಲ್ಲೇಖಿಸಿದೆ.
ಡಿಸೆಂಬರ್ ನಲ್ಲಿ ಭಾರತದಲ್ಲಿ ತಯಾರಿಸಿದ ಕೆಮ್ಮಿನ ಸಿರಪ್ ಸೇವಿಸಿ ದೇಶದಲ್ಲಿ ಕನಿಷ್ಠ 18 ಮಕ್ಕಳು ಸಾವನ್ನಪ್ಪಿದ್ದಾರೆ ಎಂದು ಉಜ್ಬೇಕಿಸ್ತಾನ ಹೇಳಿಕೊಂಡಿತ್ತು. ಸಾವನ್ನಪ್ಪಿದ 18 ಮಕ್ಕಳು ನೋಯ್ಡಾ ಮೂಲದ ಮರಿಯನ್ ಬಯೋಟೆಕ್ ತಯಾರಿಸಿದ ಕೆಮ್ಮಿನ ಸಿರಪ್ ಡಾಕ್-1 ಮ್ಯಾಕ್ಸ್ ಅನ್ನು ಸೇವಿಸಿದ್ದಾರೆ ಎಂದು ಉಜ್ಬೇಕಿಸ್ತಾನದ ಆರೋಗ್ಯ ಸಚಿವಾಲಯ ತಿಳಿಸಿತ್ತು.










