ಬೆಂಗಳೂರು : ಬಂಧಿತ ಸ್ಯಾಂಟ್ರೋ ರವಿಯನ್ನು ನಿನ್ನೆ ರಾತ್ರಿ ವಿಮಾನ ಮೂಲಕ ಬೆಂಗಳೂರಿಗೆ ಪೊಲೀಸರು ಕರೆತಂದಿದ್ದರು. ಆದರೆ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ರಹಸ್ಯವಾಗಿ ಆರೋಪಿಯನ್ನು ಪೊಲೀಸರು ಕರೆದುಕೊಂಡು ಹೋಗಿದ್ದಾರೆ. ಈ ಬಗ್ಗೆ ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಅವರು ಕಿಡಿಕಾರಿದ್ದಾರೆ.
ಕೆಐಎಎಲ್ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪೊಲೀಸರು ಪ್ರಧಾನಿಗಳು, ಮುಖ್ಯಮಂತ್ರಿಗಳು ಓಡಾಡುವ ಜಾಗದಲ್ಲಿ ಇಂತಹ ಆರೋಪಿಯನ್ನ ಯಾಕೆ ಕರೆದೊಯ್ದರು..?, ಈ ರಾಜ್ಯದಲ್ಲಿ ಪೊಲೀಸ್ ಇಲಾಖೆ ಬದುಕಿದೆಯಾ..?. ಇದನ್ನ ನೋಡ್ತಾ ಇದ್ರೆ ಈಗಲೂ ಪೊಲೀಸರು ಸ್ಯಾಂಟ್ರೋ ರವಿಗೆ ರಾಜಾತಿಥ್ಯ ನೀಡ್ತಾ ಇದ್ದಾರೆ ಎಂದು ಕಿಡಿಕಾರಿದ್ದಾರೆ.
ಗೃಹ ಮಂತ್ರಿಗಳು ಆಹಮದಾಬಾದ್ ಗೆ ಹೋಗ್ತಾರೆ, ಅದೇ ಜಾಗದಲ್ಲಿ ಸ್ಯಾಂಟ್ರೋ ರವಿ ಬಂಧನವಾಗುತ್ತದೆ. ಅಲ್ಲಿ ಬಿಜೆಪಿ ಸರ್ಕಾರ ಇದೆ, ಹೀಗಾಗಿ ಮೊದಲೇ ರವಿಯನ್ನು ಬಂಧನ ಮಾಡಿದ್ದಾರೆ. ಅವನಿಂದ ಇರುವ ದಾಖಲೆಗಳನ್ನ ತೆಗೆದುಕೊಂಡು ಈಗ ಬಂಧನದ ನಾಟಕ ಮಾಡುತ್ತಿದ್ದಾರೆ. ಪಿಎಸ್ ಐ ಡ್ರಗ್ಸ್ ಕೇಸ್ ಗಳಂತೆ ಈ ಕೇಸನ್ನು ವ್ಯವಸ್ಥಿತವಾಗಿ ಮುಚ್ಚಿ ಹಾಕ್ತಾರೆ ಎಂದು ಹೆಚ್ಡಿಕೆ ಆರೋಪಿಸಿದ್ದಾರೆ.
ಗುಜರಾತ್ ನಲ್ಲಿಯೂ ಬಿಜೆಪಿ ಸರ್ಕಾರ ಇದೆ. ಗುಜರಾತ್ ನಲ್ಲಿ ಎರಡ್ಮೂರು ದಿನದ ಹಿಂದೆಯೇ ಬಂಧಿಸಿದ್ದಾರೆ. ಏನೇನೆಲ್ಲ ಸಾಕ್ಷ್ಯ ಇಟ್ಟುಕೊಂಡಿದ್ದ ಅದನ್ನೆಲ್ಲ ಕಿತ್ತುಕೊಂಡಿದ್ದಾರೆ. ಈಗ ಕರೆದುಕೊಂಡು ಬಂದಿದ್ದಾರೆ. ಏರ್ ಪೋರ್ಟ್ ನಲ್ಲಿ ವಿಐಪಿ ಗೇಟ್ ನಲ್ಲಿ ಆತನನ್ನ ಕರೆದುಕೊಂಡು ಹೋಗ್ತಾರೆ. ಅಂದ್ರೆ ಆತನಿಗೆ ರಾಜಾತಿಥ್ಯ ಎಷ್ಟಿದೆ ಅಂತಾಯ್ತು. ಪ್ರಧಾನಿ, ಮುಖ್ಯಮಂತ್ರಿಗಳಿಗೆ ಇರುವ ವಿಐಪಿ ಗೇಟ್ ನಲ್ಲಿ ಅವ್ರನ್ನ ಯಾಕೆ ಬಿಡ್ತಾರೆ ಎಂದು ಗರಂ ಆಗಿದ್ದಾರೆ.
ಮೈಸೂರಿನಲ್ಲಿ ಮಹಿಳೆ ಕೊಟ್ಟಿರುವ ಕೇಸ್ ಮೇಲೆ ಇವರು ಬಂಧಿಸಿ ಕರೆತಂದಿರೋದು. ಬೇರೆ ವಿಷಯ ಇದೆಯಲ್ಲ ಇದನ್ನ ಯಾವ ರೀತಿ ತನಿಖೆ ಮಾಡ್ತಾರೆ. ಬಿಜೆಪಿ ಪಕ್ಷ ಈ ದೇಶದಲ್ಲಿ ಏನೇ ಬೇಕಿದ್ರು ಮಾಡ್ತಾರೆ. ಸ್ಯಾಂಟ್ರೊ ಪರಾರಿಯಾಗಲು ಮೈಸೂರು ಪೊಲೀಸರು ಸಹಾಯ ಮಾಡಿದ್ದಾರೆ. ರಾಜ್ಯ ಬಿಟ್ಟು ಹೋಗೋವರೆಗೆ ಏನು ಮಾಡ್ತಿದ್ರು?. ಪೊಲೀಸ್ ಇಲಾಖೆ ಬದುಕಿದ್ಯಾ? ಯಾವಾಗಲೋ ಸಾಯಿಸಿದ್ದಾರೆ. ಟಾಪ್ ಅಧಿಕಾರಿ ವರ್ಗಾವಣೆ ಮಾಡೋ ಅಧಿಕಾರವನ್ನೇ ಅವನಿಗೆ ಕೊಟ್ಟಿದ್ದಾರೆ ಎಂದು ವಾಗ್ದಾಳಿ ನಡೆಸಿದರು.










