ಕೆಎಸ್​​ಆರ್​ಟಿಸಿಯ ಮೊದಲ ಎಲೆಕ್ಟ್ರಿಕ್ ಬಸ್‍ಗೆ ಅಧಿಕೃತ ಚಾಲನೆ…

57
firstsuddi

ಬೆಂಗಳೂರು : ಇಂದು ಕೆಎಸ್​​ಆರ್​ಟಿಸಿಯ ಮೊದಲ ಎಲೆಕ್ಟ್ರಿಕ್ ಬಸ್ ಗೆ ಅಧಿಕೃತ ಚಾಲನೆ ಸಿಕ್ಕಿದೆ. ಮೆಜೆಸ್ಟಿಕ್ ಕೆಎಸ್​​ಆರ್​ಟಿಸಿ ನಿಲ್ದಾಣದ ಡಿಸಿ ಚಂದ್ರಶೇಖರ್ ಹಾಗೂ ಕೆಎಸ್ಆರ್ ಟಿಸಿ ವಿಭಾಗೀಯ ನಿಯಂತ್ರಣಾಧಿಕಾರಿ ಲಕ್ಷ್ಮಣ್ ಅವರು ಮೆಜೆಸ್ಟಿಕ್ ಕೆಎಸ್​​ಆರ್​ಟಿಸಿ ನಿಲ್ದಾಣದಲ್ಲಿ ಎಲೆಕ್ಟ್ರಿಕ್ ಬಸ್ ಗೆ ಚಾಲನೆ ನೀಡಿದ್ದಾರೆ.

ಮೆಜೆಸ್ಟಿಕ್ ಬಸ್ ನಿಲ್ದಾಣದಲ್ಲಿ ಮೊದಲ ಇವಿ ಬಸ್, ಪ್ರಯಾಣಿಕರನ್ನು ಕರೆದುಕೊಂಡು ಮೈಸೂರಿಗೆ ಪ್ರಯಾಣ ಆರಂಭಿಸಿದೆ. ಬಸ್ ದರ ವೋಲ್ವೋ ಬಸ್ ಗಿಂತ ಕಡಿಮೆ ಇದ್ದು 300 ರೂಪಾಯಿ ನಿಗದಿ ಮಾಡಲಾಗಿದೆ.

ಇದು ಪರಿಸರ ಸ್ನೇಹಿ ಬಸ್ ಆಗಿದ್ದು, ಪ್ರಯಾಣಿಕರಿಗೆ ಹೊಸ ಅನುಭವ ನೀಡಲಿದೆ. ಇ-ಬಸ್ ಗಳು ಆರಾಮದಾಯಕವಾದ ಆಸನ, ದೂರದರ್ಶನ, ಪ್ರೀಮಿಯಂ ಸೀಟ್ ಗಳು, ಪ್ರತಿಯೊಂದು ಸೀಟ್ ಗೂ ಚಾರ್ಜಿಂಗ್ ಸಾಕೆಟ್ , ಎಸಿ ವೆಂಟ್ ಗಳು, ಓದುವ ದೀಪಗಳು ಇನ್ನೂ ಅನೇಕ ಸೌಲಭ್ಯಗಳನ್ನು ಒಳಗೊಳ್ಳಲಿದೆ.

ಮುಂದಿನ ಮೂರು ತಿಂಗಳಲ್ಲಿ 50 ಕೆಎಸ್​​ಆರ್​ಟಿಸಿ ಎಲೆಕ್ಟ್ರಿಕ್ ಬಸ್ ಸಂಚಾರ ನಡೆಸಲಿವೆ. 300 ಕಿ.ಮೀ ವ್ಯಾಪ್ತಿಯಲ್ಲಿ ಎಲೆಕ್ಟ್ರಿಕ್ ಬಸ್ ಓಡಿಸಲು ಕೆಎಸ್​​ಆರ್​ಟಿಸಿ ನಿರ್ಧಾರ ಮಾಡಿದೆ. ಎಲೆಕ್ಟ್ರಿಕ್ ಬಸ್ ಗಳನ್ನು ಒಂದು ಸಾರಿ ಚಾರ್ಜ್ ಮಾಡಿದರೆ 300 ಕಿ.ಮೀ ಸಂಚರಿಸುತ್ತದೆ. ಇನ್ನು ಫೆಬ್ರವರಿಯಲ್ಲಿ ರೋಡಿಗಿಳಿಯುವ 50 ಬಸ್ ಗಳು ಬೆಂಗಳೂರಿನಿಂದ ಮಡಿಕೇರಿ, ವಿರಾಜಪೇಟೆ, ಚಿಕ್ಕಮಗಳೂರು, ದಾವಣಗೆರೆ ಮತ್ತು ಶಿವಮೊಗ್ಗ ನಗರಕ್ಕೆ ಸಂಪರ್ಕ ಕಲ್ಪಿಸಲಿವೆ.