ವಿಜಯನಗರ : 19 ವರ್ಷದ ಯುವತಿಯೊಬ್ಬಳು ಜೈನ ಸನ್ಯಾಸತ್ವ ಸ್ವೀಕರಿಸಿದ್ದಾಳೆ. ಹೊಸಪೇಟೆ ಮೂಲದ ಶ್ರೀಮಂತ ಕುಟುಂಬಕ್ಕೆ ಸೇರಿದ ಜೈನ ಸಮುದಾಯದ ಯುವತಿ ಮುಮುಕ್ಷಾ ವಿಧಿ ಕುಮಾರಿ ಮಹಾವೀರ ಜೈನ ಸನ್ಯಾಸ ದೀಕ್ಷೆ ಸ್ವೀಕರಿಸಿದರು. ನಿನ್ನೆ ಶ್ರೀ ಆದಿನಾಥ ಜೈನ ಶ್ವೇತಾಂಬರ ಸಂಘದ ವತಿಯಿಂದ ದೀಕ್ಷಾ ಕಾರ್ಯಕ್ರಮ ಮಲ್ಲಿಗೆ ಹೋಟೆಲ್ ನಲ್ಲಿ ಅದ್ಧೂರಿಯಾಗಿ ನಡೆಯಿತು.
ಹೊಸಪೇಟೆಯ ಉದ್ಯಮಿ ದಿವಂಗತ ಕಾಂತಿಲಾಲ್ ಮತ್ತು ರೇಖಾದೇವಿ ದಂಪತಿಯ ನಾಲ್ವರು ಪುತ್ರಿಯರಲ್ಲಿ ಮುಮುಕ್ಷಾ 3ನೇಯವರಾಗಿದ್ದಾರೆ. ಪ್ರತಿಭಾನ್ವಿತ ವಿದ್ಯಾರ್ಥಿನಿಯಾಗಿದ್ದ ಅವರು ತಮ್ಮ 10ನೇ ತರಗತಿಯಲ್ಲಿ ಶೇ.94ರಷ್ಟು ಮತ್ತು ಪಿಯುಸಿಯಲ್ಲಿ ಶೇ.99ರಷ್ಟು ಅಂಕವನ್ನು ಪಡೆದುಕೊಂಡಿದ್ದರು.
ವಿದ್ಯಾಭ್ಯಾಸದಲ್ಲಿ ಮುಂದಿದ್ದ ಮುಮುಕ್ಷಾ ಬಾಲ್ಯದಿಂದಲೇ ಜೈನ ಸನ್ಯಾಸ ತತ್ವದಲ್ಲಿ ಆಸಕ್ತಿ ಬೆಳೆಸಿಕೊಂಡಿದ್ದರು. ಅವರು ತಮ್ಮ 17ನೇ ವಯಸ್ಸಿಗೆ 48 ದಿನ ಉಪಧ್ಯಾನ ತಪ ಸಂಪನ್ನಗೊಳಿಸಿಕೊಂಡಿದ್ದರು. ಗದಗ ಜಿಲ್ಲೆಯಲ್ಲಿ ನರರತ್ನ ಮಹಾರಾಜರ ಚಾತುರ್ಮಾಸದಲ್ಲಿ ಪಾಲ್ಗೊಂಡಿದ್ದ ವಿಧಿ ಕುಮಾರಿ ಜೈನ ಧರ್ಮದ ತತ್ವ ಸಿದ್ದಾಂತಗಳಿಂದ ಆಕರ್ಷಣೆಗೊಂಡು ಸನ್ಯಾಸ ದೀಕ್ಷೆ ಪಡೆದುಕೊಂಡಿದ್ದಾರೆ.










