ವಿಮಾನ ಟಿಕೆಟ್ ಡೌನ್​ಗ್ರೇಡ್ ಮಾಡಿದ್ರೆ ಪ್ರಯಾಣಿಕರಿಗೆ ಶೇ 75 ರಷ್ಟು ಹಣ ವಾಪಸ್…

43
firstsuddi

ನವದೆಹಲಿ : ವಿಮಾನ ಪ್ರಯಾಣಕ್ಕಾಗಿ ಕಾಯ್ದಿರಿಸಿದ ಟಿಕೆಟ್ ಗಳನ್ನು ಡೌನ್ ಗ್ರೇಡ್ ಮಾಡಿದರೆ (ಕೆಳವರ್ಗಕ್ಕೆ ಬದಲಾಯಿಸಿದರೆ) ದೇಶೀಯ ಪ್ರಯಾಣಿಕರಿಗೆ ಶೇ. 75ರಷ್ಟು ಹಣವನ್ನು ವಿಮಾನಯಾನ ಸಂಸ್ಥೆಗಳು ಮರುಪಾವತಿ ಮಾಡಬೇಕು ಎಂದು ನಾಗರಿಕ ವಿಮಾನಯಾನ ನಿರ್ದೇಶನಾಲಯ ತಿಳಿಸಿದೆ. ಪರಿಷ್ಕೃತ ನಿಯಮ ಫೆಬ್ರವರಿ 15ರಿಂದ ಜಾರಿಗೆ ಬರಲಿದೆ.

ಟಿಕೆಟ್ ಕಾಯ್ದಿರಿಸಿದ ದರ್ಜೆಯ ಪ್ರಯಾಣಕ್ಕೆ ಅವಕಾಶ ಸಿಗದೇ ಇರುವ ಬಗ್ಗೆ ಮತ್ತು ವಿಮಾನಯಾನ ಸಂಸ್ಥೆಗಳೇ ಟಿಕೆಟ್ ಅನ್ನು ಡೌನ್ ಗ್ರೇಡ್ ಮಾಡುತ್ತಿರುವ ಬಗ್ಗೆ ಪ್ರಯಾಣಿಕರಿಂದ ಅನೇಕ ದೂರುಗಳು ಬಂದಿದ್ದವು. ಹೀಗಾಗಿ ನಿಯಮದಲ್ಲಿ ಪರಿಷ್ಕರಣೆ ಮಾಡಲಾಗಿದೆ ಎಂದು ಡಿಜಿಸಿಎ ತಿಳಿಸಿದೆ.

ಪರಿಷ್ಕೃತ ನಿಯಮಗಳ ಪ್ರಕಾರ : ದೇಶೀಯ ವಲಯಕ್ಕೆ ತೆರಿಗೆ ಸೇರಿದಂತೆ ಟಿಕೆಟ್ ದರದ ಶೇ.75ರಷ್ಟು ಮರುಪಾವತಿಯಾಗುವುದು. ಅಂತಾರಾಷ್ಟ್ರೀಯ ವಲಯಕ್ಕೆ 1,500 ಕಿ.ಮೀ ಅಥವಾ ಅದಕ್ಕಿಂತ ಕಡಿಮೆ ದೂರದ ವಿಮಾನಗಳಿಗೆ ತೆರಿಗೆ ಸೇರಿದಂತೆ ಟಿಕೆಟ್ ಬೆಲೆಯ ಶೇ. 30ರಷ್ಟು ಮರುಪಾವತಿಯಾಗುತ್ತದೆ. 1,500 ಕಿ.ಮೀ.ಗಳಿಂದ 3,500 ಕಿ.ಮೀ ನಡುವಿನ ವಿಮಾನಗಳಿಗೆ ತೆರಿಗೆ ಸೇರಿದಂತೆ ಟಿಕೆಟ್ ದರದ ಶೇ.50ರಷ್ಟು ಹಣ ಮರುಪಾವತಿಯಾಗಲಿದೆ. 3,500 ಕಿ.ಮೀ.ಗಿಂತ ಹೆಚ್ಚಿನ ವಿಮಾನಗಳಿಗೆ ತೆರಿಗೆ ಸೇರಿದಂತೆ ಟಿಕೆಟ್ ಬೆಲೆಯ ಶೇ.75ರಷ್ಟು ಹಣ ವಿಮಾನಯಾನ ಕಂಪನಿಗಳು ಹಿಂದಿರುಗಿಸುತ್ತದೆ.