ಓದು ಮನುಷ್ಯನ ವ್ಯಕ್ತಿತ್ವ ರೂಪಿಸುತ್ತದೆ : ಡಿ.ಕೆ.ತಾರಾದೇವಿ

96
firstsuddi

ಚಿಕ್ಕಮಗಳೂರು: ಓದು ಮನುಷ್ಯನ ವ್ಯಕ್ತಿತ್ವವನ್ನು ರೂಪಿಸುತ್ತದೆ ಎಂದು ಕೇಂದ್ರದ ಮಾಜಿ ಸಚಿವೆ ಡಿ.ಕೆ.ತಾರಾದೇವಿ ಹೇಳಿದರು.

ಕುಂಭಕ ಓದುಗ ಬಳಗ ತಾಲ್ಲೂಕಿನ ಬೂದನಿಕೆ ಗ್ರಾಮದಲ್ಲಿ ನಿನ್ನೆ ಏರ್ಪಡಿಸಿದ್ದ ಪುಸ್ತಕ ಓದು-ಉಪನ್ಯಾಸ-ಸಂವಾದಕಾರ್ಯ ಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಓದು ಸನ್ನಡತೆ, ಸಂಸ್ಕಾರ ಮತ್ತು ಸಂಸ್ಕೃತಿಯನ್ನು ಕಲಿಸುತ್ತದೆ. ಓದುಗನಲ್ಲಿ ಜ್ಞಾನ, ವೈಚಾರಿಕತೆ ಬೆಳೆಸಿ ಸುಸಂಸ್ಕೃತನನ್ನಾಗಿ ಮಾಡುವುದರ ಜೊತೆಗೆ ಆತನ ಸರ್ವಾಂಗೀಣ ಅಭಿವೃದ್ಧಿಗೆ ಕಾರಣವಾಗುತ್ತದೆ ಎಂದರು.

ಬಡತನದ ನಿರ್ಮೂಲನೆಗೆ ಓದು ಅತ್ಯಗತ್ಯ ಹಾಗಾಗಿ ಓದುವ ಅಭಿರುಚಿಯನ್ನು ಪ್ರತಿಯೊಬ್ಬರೂ ವಿಶೇಷವಾಗಿ ಗ್ರಾಮೀಣ ಜನತೆ ಬೆಳೆಸಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.

ಓದುವ ಹವ್ಯಾಸವನ್ನು ಗ್ರಾಮೀಣ ಜನರಲ್ಲಿ ಬೆಳೆಸುವ ನಿಟ್ಟಿನಲ್ಲಿ ಕುಂಭಕ ಓದುಗ ಬಳಗದ ಕಾರ್ಯ ಪ್ರಶಂಸನೀಯ ಎಂದು ಹೇಳಿದರು.

ಕಾಫಿ ಬೆಳೆಗಾರ ವಾಜುವಳ್ಳಿ ರಮೇಶ್, ಸಾಹಿತಿ ಪೂರ್ಣಚಂದ್ರ ತೇಜಸ್ವಿಯವರ ಮಾಯಾಲೋಕ ಕಾದಂಬರಿಯಲ್ಲಿನ ಕೌತುಕಮಯ ಸನ್ನಿವೇಶಗಳು ಅದರಲ್ಲಿ ಬರುವ ಪಾತ್ರಗಳು ಮತ್ತು ಅಂದಿನ ಕಾಲದ ಜನಜೀವನವನ್ನು ಸಬೀಕರೆದುರು ತೆರೆದಿಟ್ಟರು.

ಪ್ರಾಸ್ತಾವಿಕವಾಗಿ ಮಾತನಾಡಿದ ಕುಂಭಕ ಓದುಗ ಬಳಗದ ಅಧ್ಯಕ್ಷ ಕುಂದೂರು ಅಶೋಕ್, ಭಾರತ ಶಕ್ತಿಯುತವಾಗಬೇಕಾದರೆ ಅದರ ಮೂಲದ್ರವ್ಯ ಓದು. ಹಾಗಾಗಿ ಗ್ರಾಮೀಣ ಜನರಿಗೆ ಓದಿನ ಮಹತ್ವವನ್ನು ತಿಳಿಸಿ ಅವರಲ್ಲಿ ಓದುವ ಹವ್ಯಾಸವನ್ನು ಬೆಳೆಸುವ ನಿಟ್ಟಿನಲ್ಲಿ ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.

ರಂಗಕರ್ಮಿ ಡಿ.ಎಂ.ಮಂಜುನಾಥ ಸ್ವಾಮಿ, ಉಪನ್ಯಾಸಕ ಪ್ರದೀಪ್, ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷರಾದ ಕೆ.ಕೆ.ಜಗನ್ನಾಥ್, ಪೂರ್ಣೇಶ್, ಸದಸ್ಯ ನಿಂಗರಾಜು, ಚಂಚಲಾ ಅಶೋಕ್ ಉಪಸ್ಥಿತರಿದ್ದರು.