ತಿರುವನಂತಪುರಂ : ತನ್ನ ಅಪ್ರಾಪ್ತ ಮಗಳ ಮೇಲೆ ಪದೇ ಪದೇ ಅತ್ಯಾಚಾರವೆಸಗಿ ಆಕೆಯನ್ನು ಗರ್ಭಿಣಿ ಮಾಡಿದ ವ್ಯಕ್ತಿಯೊಬ್ಬನಿಗೆ ಕೇರಳ ನ್ಯಾಯಾಲಯ ಮೂರು ಜೀವಾವಧಿ ಶಿಕ್ಷೆ ವಿಧಿಸಿದೆ.
ವ್ಯಕ್ತಿಯ ವಿರುದ್ಧ ಐಪಿಸಿ ಸೆಕ್ಷನ್ ಅತ್ಯಾಚಾರ, ಲೈಂಗಿಕ ದೌರ್ಜನ್ಯ ಮತ್ತು ಪೋಕ್ಸೋ ಕಾಯ್ದೆಯಡಿ ಕೇಸ್ ದಾಖಲಾಗಿತ್ತು. ಈ ಎಲ್ಲಾ ಆರೋಪಗಳು ಸಾಬೀತಾದ ಹಿನ್ನೆಲೆಯಲ್ಲಿ ಮಂಜೇರಿ ಫಾಸ್ಟ್ ಟ್ರ್ಯಾಕ್ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ರಾಜೇಶ್ ಕೆ 3 ಜೀವಾವಾಧಿ ಶಿಕ್ಷೆಯ ಜೊತೆಗೆ 6.6 ಲಕ್ಷ ರೂ. ದಂಡವನ್ನು ವಿಧಿಸಿದ್ದಾರೆ.
ಪ್ರಕರಣದ ಬಗ್ಗೆ ವಿವರಣೆ ನೀಡಿದ ಸ್ಪೆಷಲ್ ಪಬ್ಲಿಕ್ ಪ್ರಾಸಿಕ್ಯೂಟರ್ (ಎಸ್ಎಸ್ಪಿ)ಎ ಸೋಮಸುಂದರನ್, ಮೊದಲ ಬಾರಿಗೆ 2021ರ ಮಾರ್ಚ್ನಲ್ಲಿ ಮನೆಯಲ್ಲಿ ಯಾರೂ ಇಲ್ಲದಿದ್ದಾಗ ತನ್ನ 15 ವರ್ಷದ ಮಗಳ ಮೇಲೆ ಅತ್ಯಾಚಾರವೆಸಗಿದ್ದ. ಆ ಸಂದರ್ಭ ಕೋವಿಡ್-19 ಇದ್ದಿದ್ದರಿಂದ ಬಾಲಕಿ ಆನ್ ಲೈನ್ ತರಗತಿಯಲ್ಲಿ ಓದುತ್ತಿದ್ದಳು. ತಂದೆಯ ಕೃತ್ಯವನ್ನು ಸಂತ್ರಸ್ತೆ ವಿರೋಧಿಸಿದಾಗ ಆಕೆಯ ತಾಯಿಯನ್ನು ಕೊಲ್ಲುವುದಾಗಿ ಆತ ಬೆದರಿಕೆ ಹಾಕಿದ್ದ.
ಆತ 2021ರ ಅಕ್ಟೋಬರ್ ವರೆಗೂ ಮನೆಯಲ್ಲಿ ಯಾರೂ ಇಲ್ಲದ ಸಂದರ್ಭದಲ್ಲಿ ತನ್ನ ಮಗಳ ಮೇಲೆ ಪದೇ ಪದೇ ಅತ್ಯಾಚಾರ ಎಸಗಿದ್ದಾನೆ. 2021ರಲ್ಲಿ ಆನ್ ಲೈನ್ ತರಗತಿಗಳು ಮುಕ್ತಾಯವಾಗಿ ಶಾಲೆಗಳು ಪುನರಾರಂಭವಾದಾಗ ಬಾಲಕಿ ಶಾಲೆಗೆ ಹೋಗಲು ಪ್ರಾರಂಭಿಸಿದ್ದಾಳೆ. ಈ ವೇಳೆ ಆಕೆಗೆ ಹೊಟ್ಟೆ ನೋವು ಕಾಣಿಸಿಕೊಂಡಿದ್ದು, ಆಕೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಆ ಸಂದರ್ಭ ಏನೂ ಪತ್ತೆಯಾಗಿರಲಿಲ್ಲ. 2022ರ ಜನವರಿಯಲ್ಲಿ ಆಕೆಗೆ ಮತ್ತೆ ಹೊಟ್ಟೆನೋವು ಕಾಣಿಸಿಕೊಂಡಿದ್ದು, ವೈದ್ಯರಲ್ಲಿಗೆ ಕರೆದುಕೊಂಡು ಹೋದಾಗ ಆಕೆ ಗರ್ಭಿಣಿ ಎಂಬುದು ತಿಳಿದುಬಂದಿದೆ.
ಘಟನೆ ಬೆಳಕಿಗೆ ಬರುತ್ತಿದ್ದಂತೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಸಂತ್ರಸ್ತ ಬಾಲಕಿಯ ತಂದೆಯನ್ನು ಬಂಧಿಸಿದ್ದರು. ಬಳಿಕ ಸಂತ್ರಸ್ತೆಗೆ ಗರ್ಭಪಾತ ಮಾಡಿಸಲಾಗಿತ್ತು. ಭ್ರೂಣದ ಡಿಎನ್ ಎ ಸಂಗ್ರಹಿಸಿ ಆಕೆಯ ತಂದೆಯ ಡಿಎನ್ ಎಯೊಂದಿಗೆ ವಿಶ್ಲೇಷಣೆ ಮಾಡಲಾಗಿದ್ದು, ಇದರಿಂದ ಬಾಲಕಿಯ ತಂದೆಯೇ ಅಪರಾಧಿ ಎಂಬುದು ಸಾಬೀತಾಗಿತ್ತು. ಇದೀಗ ಈತನಿಗೆ ಜೀವಾವಧಿ ಶಿಕ್ಷೆ ವಿಧಿಸಲಾಗಿದೆ.










