ದಲಿತರ ಜಮೀನನ್ನ ಉಳಿಸಿಕೊಡುವಂತೆ ಬಿಎಸ್‍ಪಿ ಒತ್ತಾಯ…

84
firstsuddi

ಚಿಕ್ಕಮಗಳೂರು : ತಾಲೂಕಿನ ಅಲ್ಲಂಪುರ ಭಾಗದಲ್ಲಿ ಹಲವು ವರ್ಷಗಳಿಂದ ಸಾಗುವಳಿ ಮಾಡಿರುವ ದಲಿತರ ಜಮೀನನ್ನು ಅವರಿಗೆ ಉಳಿಸಿಕೊಡುವಂತೆ ಬಿಎಸ್‍ಪಿ ಜಿಲ್ಲಾಡಳಿತವನ್ನು ಒತ್ತಾಯಿಸಿದೆ.

ಅಲ್ಲಂಪುರ ಭಾಗದ ಸಾಗುವಳಿದಾರರೊಂದಿಗೆ ಜಿಲ್ಲಾಧಿಕಾರಿ ಕಚೇರಿ ಸಹಾಯಕ ಚಂದ್ರಶೇಖರ್ ಅವರನ್ನು ಇಂದು ಭೇಟಿ ಮಾಡಿದ ಪಕ್ಷದ ಪದಾಧಿಕಾರಿಗಳು ಈ ಸಂಬಂಧ ಮನವಿ ಸಲ್ಲಿಸಿದರು.

ತಾಲೂಕಿನ ಕಸಬಾ ಹೋಬಳಿಯ ಅಲ್ಲಂಪುರ ಬ್ಲಾಕ್‍ನಲ್ಲಿ ಹಲವಾರು ದಲಿತ ಕುಟುಂಬಗಳು 40-50 ವರ್ಷಗಳಿಂದ ಗೋಮಾಳದ ಭೂಮಿಯಲ್ಲಿ ಸಾಗುವಳಿ ಮಾಡುತ್ತಿವೆ. ಅವರಲ್ಲಿ ಅನೇಕರಿಗೆ ಭೂಮಿ ಮಂಜೂರಾತಿಯಾಗಿದೆ. ಅವರಲ್ಲಿ ಅನೇಕರು ಅನಧಿಕೃತ ಸಾಗುವಳಿದಾರರೂ ಇದ್ದಾರೆ ಎಂದು ತಿಳಿಸಿದರು.

ಕಳೆದ ಒಂದೂವರೆ ವರ್ಷಗಳ ಹಿಂದೆಅರಣ್ಯ ವ್ಯವಸ್ಥಾಪನಾಧಿಕಾರಿಗಳು ಸಾಗುವಳಿದಾರರಿಗೆ ನೋಟಿಸ್ ನೀಡಿ ಸಾಗುವಳಿ ಮಾಡಿರುವ ಭೂಮಿ ಅರಣ್ಯ ಇಲಾಖೆ ವ್ಯಾಪ್ತಿಗೆ ಸೇರಿರುವುದಾಗಿ ತಿಳಿಸಿ ವಿಚಾರಣೆಗಾಗಿ ಅವರಿಂದ ದಾಖಲಾತಿಗಳನ್ನು ಪಡೆದುಕೊಂಡಿದ್ದಾರೆ ಎಂದು ಹೇಳಿದರು.

ಅರಣ್ಯ ವ್ಯವಸ್ಥಾಪನಾಧಿಕಾರಿಗಳು ದಾಖಲಾತಿಗಳನ್ನು ಪಡೆದು ಒಂದೂವರೆ ವರ್ಷವಾಗಿದ್ದರೂ ಇದುವರೆಗೂ ಯಾವುದೇ ವಿಚಾರಣೆ ನಡೆಸಿಲ್ಲ ಯಾವುದೇ ತೀರ್ಮಾನ ತೆಗೆದುಕೊಂಡಿಲ್ಲ ಎಂದರು.

ಇದರಿಂದಾಗಿ ಸಾಗುವಳಿ ಮಾಡಿರುವ ದಲಿತರಿಗೆ ಭೂಮಿಯನ್ನು ಕಳೆದುಕೊಂಡು ಬೀದಿಗೆ ಬೀಳುವ ಭೀತಿ ಎದುರಾಗಿದ್ದು ಮಾನಸಿಕವಾಗಿ ಜರ್ಝರಿತರಾಗುತ್ತಿದ್ದಾರೆ ಎಂದು ತಿಳಿಸಿದರು.

ಈ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆ ತುರ್ತಾಗಿ ದಾಖಲಾತಿಗಳ ಪರಿಶೀಲನೆ ಮತ್ತು ವಿಚಾರಣೆ ನಡೆಸಿ ಅಂತಿಮ ತೀರ್ಪು ನೀಡಬೇಕು ಎಂದು ಆಗ್ರಹಿಸಿದರು.

ಬಿಎಸ್‍ಪಿ ರಾಜ್ಯ ಕಾರ್ಯದರ್ಶಿ ಕೆ.ಬಿ.ಸುಧಾ, ಜಿಲ್ಲಾಧ್ಯಕ್ಷ ಕೆ.ಟಿ.ರಾಧಾಕೃಷ್ಣ, ಪದಾಧಿಕಾರಿಗಳಾದ ಕೆ.ಎಸ್.ಮಂಜುಳಾ, ವಸಂತ, ನವೀನ್, ಆರಾಧ್ಯ, ರಘು, ರವಿಕುಮಾರ್, ಧನಂಜಯ, ಸಾಗುವಳಿದಾರರಾದ ಗಂಗಾಧರ, ಕೆಂಚಯ್ಯ, ಗೌರಮ್ಮ, ನೇತ್ರಾವತಿ, ಸುರೇಂದ್ರ ಹಾಜರಿದ್ದರು.