ಏ.10, 12ರೊಳಗೆ ಕರ್ನಾಟಕ ವಿಧಾನಸಭಾ ಚುನಾವಣೆ : ಬಿಎಸ್‍ವೈ

61
firstsuddi

ಬೆಂಗಳೂರು : ಕರ್ನಾಟಕದಲ್ಲಿ ಏಪ್ರಿಲ್ 10 ಅಥವಾ 12ರೊಳಗೆ ವಿಧಾನಸಭಾ ಚುನಾವಣೆ ನಡೆಯುವ ಸಾಧ್ಯತೆಯಿದೆ ಎಂದು ಮಾಜಿ ಸಿಎಂ ಬಿ.ಎಸ್ ಯಡಿಯೂರಪ್ಪ ಅವರು ಹೇಳಿದ್ದಾರೆ.

ನಗರದ ಅರಮನೆ ಮೈದಾನದಲ್ಲಿ ನಡೆಯುತ್ತಿರುವ ಬಿಜೆಪಿಯ ರಾಜ್ಯ ವಿಶೇಷ ಕಾರ್ಯಕಾರಿಣಿಯಲ್ಲಿ ಮಾತನಾಡಿದ ಅವರು, ಏಪ್ರಿಲ್ 10 ಅಥವಾ 12ರ ಒಳಗೆ ವಿಧಾನಸಭಾ ಚುನಾವಣೆಯನ್ನು ನಿರೀಕ್ಷಿಸಲಾಗಿದೆ. ಈ ಚುನಾವಣೆಯಲ್ಲಿ ಸ್ಪಷ್ಟ ಬಹುಮತ ಪಡೆದು 130 ರಿಂದ 140 ಸೀಟು ಗೆಲ್ಲುವ ಮೂಲಕ ನಾವು ಅಧಿಕಾರಕ್ಕೆ ಬರುತ್ತೇವೆ. ಕರ್ನಾಟಕದಲ್ಲಿ ಬಿಜೆಪಿ ಅಧಿಕಾರಕ್ಕೆ ಬರುವುದನ್ನು ತಡೆಯಲು ಯಾರಿಂದಲೂ ಸಾಧ್ಯ ಇಲ್ಲ ಎಂದು ಹೇಳಿದರು.

ರಾಜ್ಯದ ಯಾವುದಾದರೂ ಮನೆಗೆ ಹೋಗಿ ಬಿಜೆಪಿ ಸರ್ಕಾರದ ಸವಲತ್ತು ತಲುಪದ ಒಂದು ಮನೆ ಇದ್ದರೆ ಹೇಳಿ, ಸಾಮಾಜಿಕ ನ್ಯಾಯ ಆಧಾರದ ಮೇಲೆ ಅನೇಕ ಸೌಲಭ್ಯಗಳನ್ನು ನೀಡಲಾಗಿದೆ. ಕರ್ನಾಟಕ ಬಜೆಟ್ ನಲ್ಲೂ ನಿರೀಕ್ಷೆ ಮೀರಿ ಹೆಚ್ಚಿನ ಯೋಜನೆಗಳನ್ನು ಘೋಷಣೆ ಮಾಡ್ತೇವೆ. ಜಗತ್ತಿನ ಎಲ್ಲ ದೇಶಗಳ ಆರ್ಥಿಕ ಸ್ಥಿತಿ ಹದಗೆಟ್ಟಿದೆ. ಆದರೆ, ಭಾರತದ ಆರ್ಥಿಕತೆ ಉತ್ತಮ ರೀತಿಯಲ್ಲಿ ದಾಪುಗಾಲು ಹಾಕುತ್ತಿದೆ ಎಂದು ಬಿಎಸ್ ವೈ ಹೇಳಿದರು.

ಮುಂದಿನ ಮುಖ್ಯಮಂತ್ರಿ ನಾವೇ ಎಂದು ಹೇಳಿಕೊಳ್ಳುತ್ತಿರುವ ಕಾಂಗ್ರೆಸ್ ನಾಯಕರಾದ ಸಿದ್ದರಾಮಯ್ಯ ಮತ್ತು ಡಿ.ಕೆ ಶಿವಕುಮಾರ್ ಅವರನ್ನು ತರಾಟೆಗೆ ತೆಗೆದುಕೊಂಡ ಯಡಿಯೂರಪ್ಪ, ರಾಹುಲ್ ಗಾಂಧಿ ನಿಮ್ಮ ನಾಯಕನಾ? ನಮ್ಮ ಪಕ್ಷದಲ್ಲಿ ಪ್ರಧಾನಿ ಮೋದಿಯಂತಹ ಪ್ರಬಲ ನಾಯಕ ಇದ್ದಾರೆ. ನರೇಂದ್ರ ಮೋದಿ ಅವರು ಜಾಗತಿಕವಾಗಿ ಪ್ರೀತಿ ಮತ್ತು ಗೌರವಕ್ಕೆ ಪಾತ್ರರಾಗಿದ್ದಾರೆ. ಆದರೆ, ನಿಮ್ಮ ಪಕ್ಷದಲ್ಲಿ ಯಾವ ನಾಯಕ ಇದ್ದಾರೆ? ಎಂದು ನಾನು ಕಾಂಗ್ರೆಸ್ ನಾಯಕರನ್ನು ಕೇಳಲು ಬಯಸುತ್ತೇನೆ ಎಂದು ಟೀಕಿಸಿದ್ದಾರೆ.

ಕಾಂಗ್ರೆಸ್ ಪಕ್ಷದ ನಾಯಕರು ಭಿನ್ನಾಭಿಪ್ರಾಯ ಮತ್ತು ಅಸಮಾಧಾನವನ್ನು ತುಂಬಿಕೊಂಡು ರಾಜ್ಯಾದ್ಯಂತ ಬಸ್ ಯಾತ್ರೆ ನಡೆಸುತ್ತಿದ್ದಾರೆ. ಕಾಂಗ್ರೆಸ್ ಬಸ್ ಯಾತ್ರೆ ಪಂಕ್ಚರ್ ಆಗಲಿದೆ. ಭಿನ್ನಾಭಿಪ್ರಾಯಗಳ ನಡುವೆಯೇ ಮತ್ತೋರ್ವ ಹಿರಿಯ ಕಾಂಗ್ರೆಸ್ ನಾಯಕ ಜಿ. ಪರಮೇಶ್ವರ ಅಸಮಾಧಾನ ವ್ಯಕ್ತಪಡಿಸಿದ್ದಾರೆ ಎಂದ ಯಡಿಯೂರಪ್ಪ, ಬಿಜೆಪಿಯಲ್ಲಿ ಯಾವುದೇ ಗೊಂದಲಗಳಿಲ್ಲ, ನಾವೆಲ್ಲರೂ ಒಗ್ಗಟ್ಟಾಗಿದ್ದೇವೆ ಎಂದಿದ್ದಾರೆ.