ಒಂದು ಧರ್ಮವನ್ನ ದೂಷಿಸುವುದು ಸರಿಯಲ್ಲ : ಹೆಚ್‍ಡಿಕೆ ಹೇಳಿಕೆಗೆ ಪೇಜಾವರ ಶ್ರೀ ಬೇಸರ…

56
firstsuddi

ಮಂಡ್ಯ : ಬ್ರಾಹ್ಮಣರಲ್ಲಿ ಯಾರೂ ಧ್ವನಿ ಎತ್ತಿ ಮಾತನಾಡುವವರು ಇಲ್ಲ. ಸಂಖ್ಯಾಬಲ ಇಲ್ಲ. ಅಲ್ಪ ಸಂಖ್ಯಾತರು ಆದ್ದರಿಂದ ಏನು ಮಾತನಾಡಿದ್ರು ನಡೆಯತ್ತೆ ಎಂದು ಮಾತನಾಡ್ತಾರೆ. ಈ ರೀತಿ ಹಿಂದಿನಿಂದಲೂ ಬ್ರಾಹ್ಮಣರ ವಿರುದ್ಧದ ಹೇಳಿಕೆಗಳು ಕೇಳಿಬರುತ್ತಿದೆ. ಪ್ರತಿ ಚುನಾವಣೆ ಬಂದಾಗ ಇದು ಹೆಚ್ಚು ಕಾಣುತ್ತೆ ಅಂತ ಪೇಜಾವರ ಶ್ರೀ ಬೇಸರ ವ್ಯಕ್ತಪಡಿಸಿದ್ದಾರೆ.

ಮಂಡ್ಯದ ಮದ್ದೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಬ್ರಾಹ್ಮಣ ಶಾಸಕರು ಎಷ್ಟು ಜನ ಇದ್ದಾರೆ..?, ಎಷ್ಟು ಮಂದಿಗೆ ಟಿಕೆಟ್ ಕೊಟ್ಟಿದ್ದಾರೆ..?, ಮಾತನಾಡುವವರು ಏನು ಬೇಕಾದರೂ ಮಾತನಾಡುತ್ತಾರೆ. ಹಿನ್ನೆಲೆ ಅಥವಾ ಪುರಾವೆ ಇಟ್ಟುಕೊಂಡು ಮಾತನಾಡಬೇಕು. ಒಂದು ವೇಳೆ ಬ್ರಾಹ್ಮಣರು ಮುಖ್ಯಮಂತ್ರಿ ಆಗೋದಾದರೆ ಆಗಲಿ. ಯಾಕೆ ಬ್ರಾಹ್ಮಣರು ಸಿಎಂ ಆಗಬಾರದು..? ಬ್ರಾಹ್ಮಣರು ಭಾರತದ ಪ್ರಜೆಗಳಲ್ಲವೆ ಎಂದು ಪ್ರಶ್ನಿಸಿದರು.

ಬ್ರಾಹ್ಮಣರಿಂದಲೇ ಗಾಂಧಿ ಹತ್ಯೆ ಎಂಬ ವಿಚಾರವಾಗಿ ಅವರು ಪ್ರತಿಕ್ರಿಯಿಸಿದ್ದು, ಒಬ್ಬ ವ್ಯಕ್ತಿ ಮಾಡಿದ ತಪ್ಪಿಗೆ ಇಡೀ ಸಮಾಜವನ್ನ ದೂಷಿಸುವುದಾದರೆ ಇತರೆ ಸಮಾಜದಲ್ಲಿ ನಡೆದ ವಿಚಾರವನ್ನ ಸಾಮೂಹಿಕರಣ ಮಾಡ್ತಿಲ್ಲ. ಬ್ರಾಹ್ಮಣ ಸಮಾಜವನ್ನ ದೂರು ಬೇಕು ಎಂದು ಯಾವುದಾದರೂ ಒಂದು ನೆಪ ಮಾಡಿ ದೂರುತ್ತಾರೆ. ಪ್ರಜಾಪ್ರಭುತ್ವ ಸಮಾಜದಲ್ಲಿ ಯಾರಿಗೂ ಅನ್ಯಾಯವಾಗಬಾರದು. ಇವತ್ತು ಯಾವುದೋ ಸಮಾಜ, ಧರ್ಮದ ಪರವಾಗಿ ಸರ್ಕಾರ ನಡೆಯೋದಾದ್ರೆ ಅನ್ಯಾಯವಾದಾಗ ಒಂದು ಧರ್ಮದ ವಿರುದ್ದ ಮತ್ತೊಂದು ಧರ್ಮ ಪುಟಿದೇಳುವುದು ಸಹಜ. ಪ್ರಜಾಪ್ರಭುತ್ವ ಸಮಾಜದಲ್ಲಿ ಈ ರೀತಿ ಒಂದು ಧರ್ಮವನ್ನ ದೂಷಿಸುವುದು ಸರಿಯಲ್ಲ. ಯಾವ ಧರ್ಮದವ್ರಿಗೂ ಅನ್ಯಾಯ ಆಗಬಾರದು ಎಂದು ಪೇಜಾವರಶ್ರೀ ಹೇಳಿದರು.

ಹೆಚ್‍ಡಿಕೆ ಹೇಳಿದ್ದೇನು? : ಕೇಂದ್ರ ಸಚಿವ ಪ್ರಹ್ಲಾದ್ ಜೋಶಿಯವರು ಜೆಡಿಎಸ್ ಪಂಚರತ್ನ ಯಾತ್ರೆಯನ್ನು ಟೀಕಿಸಿದ್ದರು. ಇದು ಪಂಚರತ್ನ ಅಲ್ಲ, ನವಗ್ರಹ ಯಾತ್ರೆ ಎಂದು ಹೇಳಿದ್ದರು. ಜೋಶಿ ಹೇಳಿಕೆಯಿಂದ ಸಿಡಿದೆದ್ದ ಹೆಚ್.ಡಿಕುಮಾರಸ್ವಾಮಿ ಈ ಬಾರಿ ಬಿಜೆಪಿ ಅಧಿಕಾರಕ್ಕೆ ಬಂದರೆ ಬ್ರಾಹ್ಮಣರಿಗೆ ಮುಖ್ಯಮಂತ್ರಿ ಪಟ್ಟ. ಆರ್ ಎಸ್ ಎಸ್ ಸಭೆಯಲ್ಲಿ ಪ್ರಹ್ಲಾದ್ ಜೋಶಿ ಹೆಸರು ಪ್ರಸ್ತಾಪವಾಗಿದೆ ಎಂದು ಹೇಳಿದ್ದರು.

ಬ್ರಾಹ್ಮಣರಲ್ಲಿ ಎರಡು ಮೂರು ವಿಧಗಳಿವೆ. ಪ್ರಹ್ಲಾದ್ ಜೋಶಿ ನಮ್ಮ ಹಳೆಯ ಬ್ರಾಹ್ಮಣರಲ್ಲ. ಅವರು ದೇಶ ಒಡೆಯುವವರು, ಕಟ್ಟುವವರಲ್ಲ. ಅವರು ಮಾರಾಠ ಪೇಶ್ವೆ ಕಾಲದ ಬ್ರಾಹ್ಮಣರು. ಅವರು ಶೃಂಗೇರಿ ಮಠ ಒಡೆದ ವರ್ಗದವರು. ಗಾಂಧಿ ಕೊಂದ ಬ್ರಾಹ್ಮಣರು ಇವರು. ಬಿಜೆಪಿಯ ಹುನ್ನಾರ ಆರ್ ಎಸ್ ಎಸ್ ಕುತಂತ್ರಕ್ಕೆ ಬಲಿಯಾಗಬೇಡಿ. ಇವರು ದೇಶವನ್ನ ಹಾಳು ಮಾಡ್ತಾರೆ ಎಂದು ಟೀಕೆ ಮಾಡಿದ್ದರು.