ಬೆಂಗಳೂರು : ಬ್ರಾಹ್ಮಣ ಮಹಾಸಭಾಕ್ಕೆ ನಾನು ಮನವಿ ಮಾಡುತ್ತೇನೆ. ಬ್ರಾಹ್ಮಣ ಸಮುದಾಯದ ವಿರುದ್ಧ ನಾನು ಹೇಳಿಕೆ ಕೊಟ್ಟಿಲ್ಲ. ಬ್ರಾಹ್ಮಣ ಸಮಾಜಕ್ಕೆ ಅವಹೇಳನ ಮಾಡಿಲ್ಲ ಎಂದು ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಅವರು ಸ್ಪಷ್ಟನೆ ನೀಡಿದ್ದಾರೆ.
ರಾಜ್ಯದಲ್ಲಿ ಬ್ರಾಹ್ಮಣ ಸಿಎಂ ಹೇಳಿಕೆ ಕುರಿತು ಭಾರೀ ವಿರೋಧ ವ್ಯಕ್ತವಾಗುತ್ತಿರುವ ಬೆನ್ನಲ್ಲೇ ಸುದ್ದಿಗಾರರೊಂದಿಗೆ ಪ್ರತಿಕ್ರಿಯಿಸಿದ ಅವರು, ನಾನು ಸಿಎಂ ಆಗಿದ್ದಾಗಲೇ ಬ್ರಾಹ್ಮಣ ಮಹಾಸಭಾಗೆ ಬನಶಂಕರಿ ಬಳಿ ಜಾಗ ಕೊಟ್ಟಿರುವುದಾಗಿದೆ. ಎರಡನೇ ಬಾರಿ ಸಿಎಂ ಆಗಿದ್ದಾಗ ಬ್ರಾಹ್ಮಣ ಅಭಿವೃದ್ಧಿ ಪ್ರಾಧಿಕಾರ ರಚನೆ ಮಾಡಿರುವುದು. ಯಾವುದೇ ಸಮಾಜದಿಂದಾದರೂ ಸಿಎಂ ಆಗಲಿ. ಅದಕ್ಕೆ ನನ್ನ ವಿರೋಧ ಇಲ್ಲ. ನಾನು ಸಹ ಇದಕ್ಕೆ ಬೆಂಬಲ ಕೊಡುತ್ತೇನೆ ಎಂದರು.
ಪೇಶ್ವೆ ಸಮಾಜದ ಡಿಎನ್ ಎ ಇರುವ ವ್ಯಕ್ತಿಯನ್ನು ಸಿಎಂ ಮಾಡಲು ಹುನ್ನಾರ ಮಾಡಿದ್ದಾರೆ ಅಂತ ಹೇಳಿದೆ. ಇದಕ್ಕೆ ಯಾಕೆ ಗಾಬರಿ…? ನಾನು ಯಾವುದೇ ಸಮಾಜಕ್ಕೆ ಅಗೌರವ ತೋರಿಲ್ಲ. ದೇಶದ ಇತಿಹಾಸದಲ್ಲಿ ನಡೆದ ಬೆಳವಣಿಗೆ ಹೇಳಿದ್ದೇನೆ. ನಾನು ಕೊಟ್ಟ ಹೇಳಿಕೆ ಬ್ರಾಹ್ಮಣ ಸಮಾಜದ ಅವಹೇಳನ ಅಲ್ಲ. ಬ್ರಾಹ್ಮಣ ಸಮಾಜದ ಬಗ್ಗೆ ಗೌರವವಿದೆ. ನಮ್ಮ ಕುಟುಂಬ ಬ್ರಾಹ್ಮಣ ಸಮಾಜ ಮತ್ತು ಶೃಂಗೇರಿ ಬಗ್ಗೆ ಗೌರವ ಇಟ್ಟುಕೊಂಡಿದ್ದೇವೆ ಎಂದು ಹೆಚ್ ಡಿಕೆ ತಿಳಿಸಿದರು.
ಪ್ರಹ್ಲಾದ್ ಜೋಶಿ ಅವರನ್ನು ಟೀಕಿಸುವ ಭರದಲ್ಲಿ ಕುಮಾರಸ್ವಾಮಿ ಅವರು, ಇವರು ನಮ್ಮ ಸಂಸ್ಕೃತಿಯ ಬ್ರಾಹ್ಮಣರಲ್ಲ. ಇವರು ಸಮಾಜ ಒಡೆಯುವವರು. ಶೃಂಗೇರಿ ಮಠ ಒಡೆದವರು, ಶಂಕರಾಚಾರ್ಯರ ವಂಶಸ್ಥರನ್ನು ಓಡಿಸಿದವರು ಎಂದು ಸಮುದಾಯದ ಬಗ್ಗೆ ಹಗುರವಾಗಿ ಮಾತನಾಡಿದ್ದರು. ನಂತರ ಚರ್ಚೆಯನ್ನು ಪೇಶ್ವೆಗಳ ಕಡೆಗೆ ತಿರುಗಿಸಿ, ಡಿಎನ್ ಎ ಕುರಿತು ಪ್ರಸ್ತಾಪಿಸಿದ್ದರು. ಕುಮಾರಸ್ವಾಮಿ ಹೇಳಿಕೆಯನ್ನು ಬ್ರಾಹ್ಮಣ ಸಮುದಾಯ ತೀವ್ರವಾಗಿ ಖಂಡಿಸಿ, ಕ್ಷಮೆಯಾಚಿಸಬೇಕು ಎಂದು ಆಗ್ರಹಿಸಿತ್ತು.










