ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸ್ಥಾನಕ್ಕೆ ಬಾಳಾಸಾಹೇಬ್ ಥೋರಟ್ ರಾಜೀನಾಮೆ…

78
firstsuddi

ಮುಂಬೈ: ಕಾಂಗ್ರೆಸ್ ಹಿರಿಯ ನಾಯಕ ಬಾಳಾಸಾಹೇಬ್ ಥೋರಟ್ ಮಹಾರಾಷ್ಟ್ರ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸ್ಥಾನಕ್ಕೆ ಇಂದು ರಾಜೀನಾಮೆ ನೀಡಿದ್ದಾರೆ.

ರಾಜ್ಯ ಕಾಂಗ್ರೆಸ್ ಅಧ್ಯಕ್ಷ ನಾನಾ ಪಟೋಲೆ ಅವರಿಂದ ತನಗೆ ಅವಮಾನವಾಗಿದೆ ಎಂದು ದೂರಿರುವ ಥೋರಟ್, ಪಟೋಲೆ ಅವರೊಂದಿಗೆ ಕೆಲಸ ಮಾಡಲು ಸಾಧ್ಯವಿಲ್ಲ ಎಂದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಪತ್ರದ ಮೂಲಕ ತಿಳಿಸಿದ್ದಾರೆ. ಜೊತೆಗೆ ರಾಜೀನಾಮೆ ಪತ್ರವನ್ನೂ ಸಲ್ಲಿಸಿದ್ದಾರೆ. ಅವರು ತಮ್ಮ ನಿಲುವಿನಲ್ಲಿ ದೃಢವಾಗಿದ್ದು, ತಮ್ಮ ನಿರ್ಧಾರವನ್ನು ಹಿಂಪಡೆಯುವ ಸಾಧ್ಯತೆ ಇಲ್ಲ ಎಂದು ಮೂಲಗಳು ತಿಳಿಸಿವೆ.

ಬಾಳಾಸಾಹೇಬ್ ಥೋರಟ್ ಅವರ ಸೋದರ ಮಾವ ಆಗಿರುವ ನಾಸಿಕ್ ಪದವೀಧರ ಕ್ಷೇತ್ರದ ಎಂಎಲ್ ಸಿ ಸುಧೀರ್ ತಾಂಬೆ ಅವರು ಕಾಂಗ್ರೆಸ್ ನ ಅಧಿಕೃತ ಅಭ್ಯರ್ಥಿಯಾಗಿದ್ದರೂ ಮಹಾರಾಷ್ಟ್ರ ವಿಧಾನ ಪರಿಷತ್ ಚುನಾವಣೆಯಲ್ಲಿ ಸ್ಪರ್ಧಿಸಲು ನಿರಾಕರಿಸಿದ ಕೆಲವು ದಿನಗಳ ನಂತರ ಈ ಬೆಳವಣಿಗೆ ಕಂಡುಬಂದಿದೆ. ಅವರು ತಮ್ಮ ಮಗ ಸತ್ಯಜಿತ್ ತಾಂಬೆಯನ್ನು ಪಕ್ಷೇತರ ಅಭ್ಯರ್ಥಿಯನ್ನಾಗಿ ಕಣಕ್ಕಿಳಿಸಿದ್ದು ಅವರು ಚುನಾವಣೆಯಲ್ಲಿ ಗೆದ್ದಿದ್ದಾರೆ.

ಎಂಎಲ್ ಸಿ ಚುನಾವಣೆಯಲ್ಲಿ ಪಕ್ಷ ವಿರೋಧ ಚಟುವಟಿಕೆ ನಡೆಸಿದ್ದಾರೆ ಎಂದು ಸುಧೀರ್ ತಾಂಬೆ ಹಾಗೂ ಸತ್ಯಜಿತ್ ತಾಂಬೆ ಅವರನ್ನು ಕಾಂಗ್ರೆಸ್ ಅಮಾನತುಗೊಳಿಸಿತ್ತು. ಹಾಗಾಗಿ ರಾಜ್ಯ ಕಾಂಗ್ರೆಸ್ ನಾಯಕತ್ವದಿಂದ ನನಗೆ ಅವಮಾನವಾಗಿದೆ. ತಾಂಬೆ ವಿಚಾರದಲ್ಲಿ ನನ್ನ ಕುಟುಂಬದ ವಿರುದ್ಧ ಹೇಳಿಕೆ ನೀಡಲಾಗುತ್ತಿದೆ ಎಂದು ಥೋರಟ್ ಪತ್ರದಲ್ಲಿ ಬೇಸರ ವ್ಯಕ್ತಪಡಿಸಿದ್ದಾರೆ.