ಚಿಕ್ಕಬಳ್ಳಾಪುರ : ಲಂಚ ಸ್ವೀಕರಿಸುತ್ತಿದ್ದಾಗ ಕಾನೂನು ಮಾಪನ ಶಾಸ್ತ್ರ ಇಲಾಖೆಯ ಸಹಾಯಕ ನಿಯಂತ್ರಕಿ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.
ಚಿಕ್ಕಬಳ್ಳಾಪುರ ಜಿಲ್ಲಾ ಕಾನೂನು ಮಾಪನ ಶಾಸ್ತ್ರ ಇಲಾಖೆಯ ಸಹಾಯಕ ನಿಯಂತ್ರಕಿ ಎಸ್. ಮಾಲಾ ಕಿರಣ್ ಲೋಕಾಯುಕ್ತ ಬಲೆಗೆ ಬಿದ್ದ ಅಧಿಕಾರಿಯಾಗಿದ್ದಾರೆ. ನಗರದ ಶಿಡ್ಲಘಟ್ಟ ರಸ್ತೆಯಲ್ಲಿರುವ ಬಸವೇಶ್ವರ ಫ್ಯೂಯಲ್ ಸೆಂಟರ್ ನಲ್ಲಿ ಪೆಟ್ರೋಲ್ ಬಂಕ್ ಮೀಟರ್ ನವೀಕರಣಕ್ಕೆ 8,000 ರೂಪಾಯಿ ಲಂಚಕ್ಕೆ ಮಾಲೀಕ ಜಯಸೂರ್ಯ ಬಳಿ ಬೇಡಿಕೆ ಇಟ್ಟಿದ್ದರು. ಹೀಗಾಗಿ ಲೋಕಾಯುಕ್ತ ಅಧಿಕಾರಿಗಳು ದಾಳಿ ಮಾಡಿ ಲಂಚ ಪಡೆಯುವಾಗ ರೆಡ್ ಹ್ಯಾಂಡಾಗಿ ಸೆರೆ ಹಿಡಿದಿದ್ದಾರೆ.
ಮೇಲ್ನೋಟಕ್ಕೆ ಆರೋಪ ಸಾಬೀತಾದ ಹಿನ್ನೆಲೆ ಲೋಕಾಯುಕ್ತ ಅಧಿಕಾರಿಗಳು 14 ದಿನಗಳ ಕಾಲ ಎಸ್. ಮಾಲಾ ಕಿರಣ್ ರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ಮತ್ತೊಂದೆಡೆ ಎಸ್. ಮಾಲಾ ಕಿರಣ್ ಬಗ್ಗೆ ವ್ಯಾಪಕ ಭ್ರಷ್ಟಾಚಾರದ ಆರೋಪ ಕೇಳಿ ಬಂದ ಹಿನ್ನಲೆ ಚಿಕ್ಕಬಳ್ಳಾಪುರದ ಲೋಕಾಯುಕ್ತ ಎಸ್ಪಿ ಪವನ್ ನೆಚ್ಚೂರು ನೇತೃತ್ವದಲ್ಲಿ ಲೋಕಾಯುಕ್ತ ಅಧಿಕಾರಿಗಳು, ಮಾಲಾ ಕಿರಣ್ಗೆ ಸೇರಿದ ಬೆಂಗಳೂರಿನ ನಿವಾಸದ ಮೇಲೂ ದಾಳಿ ಮಾಡಿ ಪರಿಶೀಲನೆ ನಡೆಸಿದ್ದಾರೆ.










