ಬಸವಾದಿ ಶರಣರ ವಚನಗಳು ಇಂದಿನ ರೋಗಗ್ರಸ್ಥ ಸಮಾಜಕ್ಕೆ ದಿವ್ಯೌಷಧ : ನಾಗರಾಜರಾವ್ ಕಲ್ಕಟ್ಟೆ.

144
firstsuddi

ಚಿಕ್ಕಮಗಳೂರು : 12ನೇ ಶತಮಾನದ ಬಸವಾದಿ ಶರಣರ ವಚನಗಳು ಇಂದಿನ ರೋಗಗ್ರಸ್ಥ ಸಮಾಜಕ್ಕೆ ದಿವ್ಯೌಷಧಗಳಾಗಿವೆ ಎಂದು ಸಾಹಿತಿ, ಕಳಸಾಪುರ ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯ ಹೆಚ್.ಎಂ. ನಾಗರಾಜರಾವ್ ಕಲ್ಕಟ್ಟೆ ಹೇಳಿದರು

ಮಲ್ಲಿಗೆ ಸುಗಮ ಸಂಗೀತ ಟ್ರಸ್ಟ್, ಜಿಲ್ಲಾ ಮಕ್ಕಳ ಸಾಹಿತ್ಯ ಪರಿಷತ್ ಮತ್ತು ಬೀರೂರು ಮಲ್ಲಿಗೆ ಬಳಗದ ವತಿಯಿಂದ ನಗರದ ಮಾಡೆಲ್ ಇಂಗ್ಲಿಷ್ ಪ್ರೌಢಶಾಲೆಯಲ್ಲಿ ನಿನ್ನೆ ನಡೆದ ವಚನ ಗಾಯನ ಕಲಿಕಾ ಶಿಬಿರದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.

ಬಸವಾದಿ ಶರಣರ ವಚನಗಳು ಅನುಭವದ ಮೂಸೆಯಿಂದ ಬಂದಂತವು ಅವುಗಳ ವಿಶೇಷವೆಂದರೆ ಅವುಗಳನ್ನು ಹಾಡಿದರೆ ಹಾಡಾಗುತ್ತವೆ, ಓದಿದರೆ ಗದ್ಯವಾಗುತ್ತವೆ ಎಂದರು.

ಭಕ್ತಿ ಭಂಡಾರಿ ಬಸವಣ್ಣನವರ ಇವನಾರವ ಇವನಾರವ, ಎನಗಿಂತ ಕಿರಿಯರಿಲ್ಲ ಶಿವಶರಣರಿಗಿಂತ ಹಿರಿಯರಿಲ್ಲ ಸೇರಿದಂತೆ ಅನೇಕ ವಚನಗಳು ಸಮಾಜದಲ್ಲಿನ ಅಸಮಾನತೆ, ತಾರತಮ್ಯ, ಅಸ್ಪೃಶ್ಯತೆಯಂತಹ ಪಿಡುಗುಗಳನ್ನು ಹೋಗಲಾಡಿಸಿ ಭಾವೈಕ್ಯತೆಯನ್ನು ಬೆಳೆಸುತ್ತವೆ ಎಂದು ತಿಳಿಸಿದರು.

ಬಸವಣ್ಣನವರು ಕಲಬೇಡ ಕೊಲಬೇಡ ವಚನದ ಮೂಲಕ ಮಾನವ ಜನಾಂಗಕ್ಕೆ ನೀಡಿರುವ ಸಪ್ತ ಸೂತ್ರಗಳನ್ನು ಪ್ರತಿಯೊಬ್ಬರೂ ತಮ್ಮ ಬದುಕಿನಲ್ಲಿ ಅಳವಡಿಸಿಕೊಂಡಲ್ಲಿ ಆರೋಗ್ಯವಂತ ಸಮಾಜದ ನಿರ್ಮಾಣವಾಗುತ್ತದೆ ಎಂದು ಹೇಳಿದರು.

ಗಾಯಕ ಮಲ್ಲಿಗೆ ಸುಧೀರ್ ಮಾತನಾಡಿ, ಡಿವಿಜಿಯವರು ಮಂಕುತಿಮ್ಮನ ಕಗ್ಗದಲ್ಲಿ ಹೇಳಿರುವಂತೆ ದೀನ ದುರ್ಬಲರಿಗೆ ಬೆಲ್ಲ-ಸಕ್ಕರೆಯಂತಾಗಬೇಕು ಎಲ್ಲರೊಳಗೊಂದಾಗಿ ಬದುಕಬೇಕು ಎಂದು ವಿದ್ಯಾರ್ಥಿಗಳಿಗೆ ಕಿವಿ ಮಾತು ಹೇಳಿದರು.

ಅಧ್ಯಕ್ಷತೆ ವಹಿಸಿ ಮಾತನಾಡಿದ ಶಾಲೆಯ ಪ್ರಾಂಶುಪಾಲ ಎಂ.ಎನ್. ಷಡಾಕ್ಷರಿ ಬಸವಣ್ಣನವರ ವಚನಗಳು ಸರಳವಾಗಿರುವುದರಿಂದಾಗಿ ಅವು ಎಲ್ಲರ ಮನಸ್ಸನ್ನು ಮುಟ್ಟುತ್ತವೆ ಎಂದರು.

ಶಾಲೆಗೆ ಆಗಮಿಸಿ ವಿದ್ಯಾರ್ಥಿಗಳಿಗೆ ವಚನ ಗಾಯನವನ್ನು ಕಲಿಸಿದ ಹಿನ್ನೆಲೆಯಲ್ಲಿ ಗಾಯಕ ಮಲ್ಲಿಗೆ ಸುದೀರ್ ಅವರಿಗೆ ಕೃತಜ್ಞತೆ ಸಲ್ಲಿಸಿದರು. ಗಾಯಕ ಮಲ್ಲಿಗೆ ಸುಧೀರ್ ಮತ್ತು ಮಂಜುಳಾ ಮಹೇಶ್ ಅವರು ಬೆಳಗಿನಿಂದ ಸಂಜೆವರೆಗೆ ವಿದ್ಯಾರ್ಥಿಗಳಿಗೆ ಭಕ್ತಿ ಭಂಡಾರಿ ಬಸವಣ್ಣನವರ ವಚನ ಗಾಯನದ ತರಬೇತಿ ನೀಡಿದರು.

ಶಿಬಿರದಲ್ಲಿ ಕಲಿತವಚನ ಗಾಯನವನ್ನು ವಿದ್ಯಾರ್ಥಿಗಳು ಸಮಾರಂಭದಲ್ಲಿ ಪ್ರಸ್ತುತಪಡಿಸಿದರು. ಈ ವೇಳೆ ಜಿಲ್ಲಾ ಮಕ್ಕಳ ಸಾಹಿತ್ಯ ಪರಿಷತ್ತಿನ ಪ್ರಧಾನ ಕಾರ್ಯದರ್ಶಿ ಮಂಜುಳಾ ಮಹೇಶ್ ಅವರಿಂದ ನಡೆದ ಜಾನಪದ ಗೀತೆಗಳ ಗಾಯನ ಗಮನ ಸೆಳೆಯಿತು. ಜಿಲ್ಲಾ ಮಕ್ಕಳ ಸಾಹಿತ್ಯ ಪರಿಷತ್ತಿನ ಸಂಚಾಲಕ ಸುರೇಶ್ ಮುಖ್ಯ ಶಿಕ್ಷಕ ಯೋಗೀಶ್ ಉಪಸ್ಥಿತರಿದ್ದರು.