ಚಿಕ್ಕಬಳ್ಳಾಪುರ : ಪ್ರೇಮಿಗಳ ದಿನದಂದೇ 20 ವರ್ಷದ ಯುವಕನೊರ್ವ ನಂದಿಬೆಟ್ಟದ ಟಿಪ್ಪು ಡ್ರಾಪ್‌ನಿಂದ ಬಿದ್ದು ಆತ್ಮಹತ್ಯೆ ಮಾಡಿಕೊಂಡಿದ್ದು, ಆತನ ಮೃತದೇಹ ಪತ್ತೆಯಾಗಿದೆ.
ಮೂಲತಃ ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನ ಅಂಬರಹಳ್ಳಿ ನಿವಾಸಿಯಾಗಿರುವ 20 ವರ್ಷದ ಅರುಣ್, ಬೆಂಗಳೂರಿನ ಬಿಟಿಎಂ ಲೇಔಟ್ ನಲ್ಲಿ ಖಾಸಗಿ ಆಸ್ಪತ್ರೆಯಲ್ಲಿ ಫಾರ್ಮಾಸಿಸ್ಟ್ ಆಗಿ ಕೆಲಸ ಮಾಡುತ್ತಿದ್ದ. ಸ್ನೇಹಿತರ ಜೊತೆ ಪಿ.ಜಿ.ಯಲ್ಲಿ ಉಳಿದುಕೊಂಡಿದ್ದ.
ಏನಿದು ಪ್ರಕರಣ?
ಕಳೆದ ಶನಿವಾರ ತನ್ನ ಸ್ನೇಹಿತನ ತನ್ನ ಸ್ನೇಹಿತನ ಕೆಎ 11 ಇಎಸ್ 9027 ನಂಬರಿನ ಡ್ಯೂಕ್ ಬೈಕ್ ನಲ್ಲಿ ನಂದಿಬೆಟ್ಟಕ್ಕೆ ಬಂದ ಅರುಣ್, ಪಾರ್ಕಿಂಗ್ ಪ್ಲಾಟ್ ನಲ್ಲಿ ಬೈಕ್ ನಿಲ್ಲಿಸಿ ನಂದಿಬೆಟ್ಟದ ಮೇಲ್ಭಾಗಕ್ಕೆ ಹೋಗಿದ್ದಾನೆ. ಆದರೆ ಶನಿವಾರ ಬೆಟ್ಟದ ಮೇಲೆ ಹೋದವನು ಮರಳಿ ವಾಪಸ್ ಬಂದಿಲ್ಲ. ಶನಿವಾರ, ಭಾನುವಾರ, ಸೋಮವಾರ ಕಾದರೂ ಅರುಣ್ ವಾಪಸ್ ಬಾರದ ಹಿನ್ನೆಲೆ ಅನುಮಾನಗೊಂಡ ಹೆಲ್ಮೆಟ್ ಲಾಕ್ ರೂಂ ಮಾಲೀಕರು, ಪೊಲೀಸರಿಗೆ ತಿಳಿಸಿದ್ದಾರೆ. ಸಿಸಿಟಿವಿ ದೃಶ್ಯಾವಳಿ ಪರಿಶೀಲನೆ ನಡೆಸಿದಾಗ ಅರುಣ್ ಹೋಗಿರೋ ವಿಡಿಯೋ ಸಿಕ್ಕಿದೆ. ಆದರೆ ವಾಪಾಸ್ ಬಂದಿರೋ ವಿಡಿಯೋ ಸಿಕ್ಕಿಲ್ಲ. ಹೀಗಾಗಿ ಬೆಟ್ಟವೆಲ್ಲಾ ತಡಿಕಾಡಿದಾಗ ಟಿಪ್ಪು ಡ್ರಾಪ್ ನ ಜಾಗದಲ್ಲಿ ಅರುಣ್ ಬ್ಯಾಗ್ ಪತ್ತೆಯಾಗಿದೆ. ನಂತರ ಹುಡುಕಾಡಿದಾಗ ಅರುಣ್ ಶವ ಪತ್ತೆಯಾಗಿದೆ.
ಬ್ಯಾಗ್ ನಲ್ಲಿ ಡೆತ್‌ನೋಟ್ ಸಹ ಪತ್ತೆಯಾಗಿದ್ದು, ಅದರಲ್ಲಿ ಸಾವಿಗೆ ನಿಖರ ಕಾರಣ ಬರೆದಿಲ್ಲ. ತಾನು ಸಂತೋಷವಾಗಿ ಸಾಯುತ್ತಿದ್ದೇನೆ. ರಾಜಕೀಯ ವ್ಯವಸ್ಥೆ ಸರಿ ಇಲ್ಲ. ನಟ ಉಪೇಂದ್ರ ಅವರ ಪ್ರಜಾಕೀಯ ಪಕ್ಷದ ಸಿದ್ದಾಂತಗಳನ್ನ ಜನ ಬೆಂಬಲಿಸಿಬೇಕು ಎಂದು ಡೆತ್‌ನೋಟ್ ನಲ್ಲಿ ಯುವಕ ಬರೆದಿದ್ದಾರೆ. ಘಟನೆ ಸಂಬಂಧ ನಂದಿ ಗಿರಿಧಾಮ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.










