ನವದೆಹಲಿ : ತಲೆಮರೆಸಿಕೊಂಡಿರುವ ಕೆನಡಾದ ವಾಂಟೆಡ್ ಗ್ಯಾಂಗ್ ಸ್ಟರ್ ಲಖ್ಬೀರ್ ಸಿಂಗ್ ಸಂಧು ಅಲಿಯಾಸ್ ಲಾಂಡಾ ಬಗ್ಗೆ ಮಾಹಿತಿ ನೀಡಿದವರಿಗೆ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್ಐಎ) 15 ಲಕ್ಷ ರೂಪಾಯಿ ಬಹುಮಾನ ಘೋಷಿಸಿದೆ.
ಲಾಂಡಾ ಬಗ್ಗೆ ಯಾವುದೇ ಮಾಹಿತಿ ಒದಗಿಸಿದರೂ, ಆ ಮಾಹಿತಿ ಒದಗಿಸಿದವರ ವಿವರಗಳನ್ನು ಬಹಿರಂಗಪಡಿಸುವುದಿಲ್ಲ ಎಂದು ಎನ್ ಐಎ ಸ್ಪಷ್ಟಪಡಿಸಿದೆ.
ಆಗಸ್ಟ್ 20, 2022 ರ ನಿಯಮಿತ ಪ್ರಕರಣ ಸಂಖ್ಯೆ 37/2022/NIA/DLI ನಲ್ಲಿ ಲಾಂಡಾ ಎನ್ಐಎಗೆ ಬೇಕಾಗಿದ್ದಾರೆ ಎಂದು ಎನ್ಐಎ ಹೇಳಿದೆ. ಯಾವುದೇ ವ್ಯಕ್ತಿಯು ಲಖ್ಬೀರ್ ಬಗ್ಗೆ ಯಾವುದೇ ಮಾಹಿತಿ ಹೊಂದಿದ್ದರೆ, ಆ ಮಾಹಿತಿಯನ್ನು 011-24368800, Whatsapp ಮತ್ತು ಟೆಲಿಗ್ರಾಮ್ ಸಂಖ್ಯೆ +91-8585931100 ಮತ್ತು ಇಮೇಲ್ ಐಡಿ: do.nia a@gov ಗೆ ನೀಡಬಹುದು. ಎನ್ಐಎಯ ಪ್ರಧಾನ ಕಚೇರಿಯು ನವದೆಹಲಿಯಲ್ಲಿದೆ ಎಂದು ಎನ್ಐಎ ಹೇಳಿದೆ
ಪಂಜಾಬ್ ನ ತರ್ನ್ ತರನ್ ಜಿಲ್ಲೆಯ ಹರಿಕೆ ಗ್ರಾಮದ ನಿವಾಸಿಯಾಗಿರುವ ಲಾಂಡಾ ಪ್ರಸ್ತುತ ಕೆನಡಾದ ಆಲ್ಬರ್ಟಾದ ಎಡ್ಮಂಟನ್ ನಲ್ಲಿ ನೆಲೆಸಿದ್ದಾನೆ. ದೇಶದ ವಿವಿಧ ಭಾಗಗಳಲ್ಲಿ ಕಾನೂನುಬಾಹಿರ ಚಟುವಟಿಕೆಗಳಲ್ಲಿ ತೊಡಗಿದ್ದಕ್ಕಾಗಿ ಲಾಂಡಾ ವಿರುದ್ಧ ಎನ್ ಐಎ ಕಳೆದ ವರ್ಷ ಆಗಸ್ಟ್ 20 ರಂದು ಐಪಿಸಿಯ ಸೆಕ್ಷನ್ 120ಬಿ, 121, 121ಎ ಮತ್ತು ಕಾನೂನುಬಾಹಿರ ಚಟುವಟಿಕೆಗಳ ತಡೆ ಕಾಯ್ದೆ 1967ರ ಸೆಕ್ಷನ್ 17, 18, 18-ಬಿ ಹಾಗೂ 38ರ ಅಡಿಯಲ್ಲಿ ಪ್ರಕರಣ ದಾಖಲಿಸಿತ್ತು.










