ರಾಜ್ಯ ಬಜೆಟ್ 2023 : ಬೊಮ್ಮಾಯಿ ಮಂಡಿಸಿದ ಬಜೆಟ್‍ನಲ್ಲಿ ಏನೇನಿದೆ?

87
firstsuddi

ಬೆಂಗಳೂರು : ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಇಂದು 2023-24ನೇ ಸಾಲಿನ ಆದಾಯ ಹೆಚ್ಚುವರಿ ಬಜೆಟ್ ಮಂಡಿಸಿದ್ದಾರೆ.

• ರಾಜ್ಯದ 56 ಲಕ್ಷ ಸಣ್ಣ ಮತ್ತು ಅತಿಸಣ್ಣ ರೈತರ ಕುಟುಂಬಗಳಿಗೆ 180 ಕೋಟಿ ರೂ. ವೆಚ್ಚದಲ್ಲಿ ಜೀವನ್ಜ್ಯೋತಿ ವಿಮಾ ಯೋಜನೆ, ರೈತ ವಿದ್ಯಾನಿಧಿ ಯೋಜನೆ ವಿಸ್ತರಣೆ.

• ಎಸ್ ಸಿ, ಎಸ್ ಟಿ ಗುತ್ತಿಗೆದಾರರಿಗೆ ಶೇ 24ರವರೆಗೆ ಮೀಸಲಾತಿ ನೀಡಲಾಗುವುದು. 50 ಲಕ್ಷ ಮೊತ್ತದಿಂದ 1 ಕೋಟಿವರೆಗಿನ ಟೆಂಡರ್ ನಲ್ಲಿ ಈ ಮೀಸಲಾತಿ ಅನ್ವಯವಾಗಲಿದೆ.

• ಮಠ-ಮಂದಿರಗಳ ಅಭಿವೃದ್ಧಿಗೆ ಬಜೆಟ್ ನಲ್ಲಿ 1,000 ಕೋಟಿ ರೂ. ಹಣ ಮೀಸಲಿರಿಸಲಾಗಿದೆ. ದೇವಸ್ಥಾನಗಳ ಜೀರ್ಣೋದ್ಧಾರಕ್ಕೆ 475 ಕೋಟಿ ರೂ. ಅನುದಾನ ಮೀಸಲಿಡಲಾಗಿದೆ. ಕಿತ್ತೂರು ಭಾಗದ ಅಭಿವೃದ್ಧಿಗೆ ಕಿತ್ತೂರು ಕರ್ನಾಟಕ ಮಂಡಳಿ ಸ್ಥಾಪನೆ ಮಾಡಲಾಗುವುದು ಎಂದೂ ಘೋಷಿಸಲಾಗಿದೆ.

• ಶಾಲಾ ಶಿಕ್ಷಣದ ನಂತರ ವಿವಿಧ ಕಾರಣಗಳಿಂದ ವಿಧ್ಯಾಭ್ಯಾಸ ಮುಂದುವರಿಸಲು ಸಾಧ್ಯವಾಗದವರಿಗೆ ಐಐಟಿಯಲ್ಲಿ ಮೂರು ತಿಂಗಳ ವೃತ್ತಿಪರ ತರಬೇತಿ ಪಡೆಯಲು ಮೂರು ತಿಂಗಳ ಕಾಲ ಮಾಸಿಕ 1,500 ರೂ. ಶಿಷ್ಯವೇತನ ನೀಡಲಾಗುವುದು. ತರಬೇತಿ ಪೂರ್ಣಗೊಂಡವರಿಗೆ ಅಪ್ರೈಂಟಿಸ್ ಶಿಪ್ ಕಾರ್ಯಕ್ರಮದಡಿ 3 ತಿಂಗಳು 1,500 ರೂ. ನೀಡಲಾಗುವುದು

• ಪದವಿ ಶಿಕ್ಷಣವನ್ನು ಪೂರೈಸಿ ಮೂರು ವರ್ಷಗಳಾದರೂ ಉದ್ಯೋಗ ದೊರೆಯದ ಯುವಕರಿಗೆ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಭಾಗವಹಿಸಲು ಪ್ರೋತ್ಸಾಹಿಸುವುದಕ್ಕಾಗಿ ‘ಯುವಸ್ನೇಹಿ’ ಯೋಜನೆ ಅಡಿ ಒಂದು ಬಾರಿಯ ಆರ್ಥಿಕ ನೆರವಾಗಿ 2,000 ರೂ. ನೀಡಲಾಗುವುದು.

• ಸಾರಾಯಿ, ಸೇಂದಿ ಬಾಡಿಗೆಗಳ ಅಬಕಾರಿ ಸುಂಕ ಬಾಕಿ ಪಾವತಿದಾರರಿಗೆ ಜೂನ್ 30ರ ಒಳಗೆ ಪಾವತಿ ಮಾಡಿದರೆ ಬಡ್ಡಿ ಮತ್ತು ದಂಡ ಪಾವತಿಯಲ್ಲಿ ಪರಿಹಾರ.

• ಮನೆ ಮನೆಗೆ ಆರೋಗ್ಯ’ ಎಂಬ ಜನಪ್ರಿಯ ಘೋಷಣೆ ಮಾಡಲಾಗಿದೆ. ಇದರಡಿ ಗ್ರಾಮೀಣ ಜನತೆಗೆ 2023-24ನೇ ಸಾಲಿನಲ್ಲಿ ಎರಡು ಬಾರಿ ಹಳ್ಳಿಗಳಲ್ಲಿ ಆರೋಗ್ಯ ಶಿಬಿರಗಳನ್ನು ಸ್ಥಳೀಯ ಪ್ರಾಥಮಿಕ ಆರೋಗ್ಯ ಕೇಂದ್ರಗಳ ಮೂಲಕ ಆಯೋಜಿಸಲಾಗುವುದು. ದೀರ್ಘಕಾಲಿಕ ಕಾಯಿಲೆಗಳಿಂದ ಬಳಲುತ್ತಿರುವವರ ಮನೆ ಬಾಗಿಲಿಗೆ ಔಷಧಿಗಳನ್ನು ಕ್ರಮವಹಿಸಲಾಗುವುದು.

• ಆಶಾ ಕಾರ್ಯಕರ್ತೆಯರು, ಬಿಸಿಯೂಟ ತಯಾರಕರು, ಗ್ರಂಥ ಪಾಲಕರ ಗೌರವಧನ 1000 ರೂ. ಹೆಚ್ಚಳಕ್ಕೆ ನಿರ್ಧಾರ ಕೈಗೊಳ್ಳಲಾಗಿದೆ. ಇದಕ್ಕಾಗಿ 775 ಕೋಟಿ ರೂ. ಅನುದಾನ ಹೆಚ್ಚಳ ಮಾಡಲಾಗಿದೆ.

• 69,000 ಬೀದಿ ವ್ಯಾಪಾರಿಗಳಿಗೆ 70 ಕೋಟಿ ಸಾಲ ಮಂಜೂರು. ಕೃಷಿ ಮತ್ತು ಪೂರಕ ಚಟುವಟಿಕೆಗಳಿಗೆ 49,031 ಕೋಟಿ ಮೀಸಲು. ಎಸ್ ಸಿ, ಎಸ್ ಟಿ ನಿಗಮಗಳಿಗೆ 795 ಕೋಟಿ ರೂ. ಒದಗಿಸಲಾಗಿದೆ.

• ಎಸ್ ಸಿ, ಎಸ್ ಟಿ ಬಿಪಿಎಲ್ ಕಾರ್ಡ್ ಹೊಂದಿದವರಿಗೆ ಅಮರ್ ಜ್ಯೋತಿ ಯೋಜನೆಯಡಿ 75 ಯೂನಿಟ್ ಉಚಿತ ವಿದ್ಯುತ್. ಮಾರಣಾಂತಿಕ ಕಾಯಿಲೆ ಹೊಂದಿದ ಅಂಗನವಾಡಿ ಕಾರ್ಯಕರ್ತೆಯರಿಗೆ 50,000 ರೂ. ಆರ್ಥಿಕ ಭದ್ರತೆ ಜೊತೆಗೆ ಸ್ವಯಂ ನಿವೃತ್ತಿ ಅವಕಾಶ

• ಸೀಮೆಎಣ್ಣೆ ಬಳಕೆಯಿಂದ ಉಂಟಾಗುವ ಪರಿಸರ ಮಾಲಿನ್ಯ ಮತ್ತು ಅದರ ಬೆಲೆಯ ಏರಿಳಿತದಿಂದ ದೋಣಿಗಾರರಿಗೆ ಉಂಟಾಗುವ ಆರ್ಥಿಕ ಸಂಕಷ್ಟ ತಪ್ಪಿಸಲು ಮುಂದಿನ 2 ವರ್ಷಗಳಲ್ಲಿ ಎಲ್ಲಾ ಸೀಮೆಎಣ್ಣೆ ಆಧಾರಿತ ದೋಣಿಗಳಲ್ಲಿ ಪೆಟ್ರೋಲ್/ಡೀಸೆಲ್ ಆಧಾರಿತ ಮೋಟಾರ್ ಇಂಜಿನ್ ಅನ್ನು ಅಳವಡಿಸಲು ತಲಾ 50 ಸಾವಿರ ರೂ. ನಂತೆ ಸಹಾಯಧನ ನೀಡಲಾಗುವುದು. ಇದಕ್ಕಾಗಿ ಪ್ರಸಕ್ತ ವರ್ಷದಲ್ಲಿ 40 ಕೋಟಿ ರೂ. ಗಳನ್ನು ಮೀಸಲಿಡಲಾಗುವುದು.

• ತುಮಕೂರು ಜಿಲ್ಲೆಯ ತಿಪಟೂರಿನಲ್ಲಿ ತೋಟಗಾರಿಕಾ ಮಹಾವಿದ್ಯಾಲಯ ಸ್ಥಾಪಿಸಲಾಗುವುದು. ಕೋಲಾರ, ಚಿಕ್ಕಬಳ್ಳಾಪುರ ಮತ್ತು ಸುತ್ತಮುತ್ತಲಿನ ಜಿಲ್ಲೆಗಳ ರೇಷ್ಮೆ ಬೆಳೆಗಾರರಿಗೆ ಅನುಕೂಲವಾಗುವಂತೆ ಏಷ್ಯಾದಲ್ಲಿಯೇ 2ನೇ ಅತಿದೊಡ್ಡ ರೇಷ್ಮೆ ಮಾರುಕಟ್ಟೆ ಹೊಂದಿರುವ ಶಿಡ್ಲಘಟ್ಟದಲ್ಲಿ ನಬಾರ್ಡ್ ಯೋಜನೆಯಡಿ 75 ಕೋಟಿ ರೂ. ಗಳ ವೆಚ್ಚದಲ್ಲಿ ಹೈ-ಟೆಕ್ ರೇಷ್ಮೆ ಗೂಡು ಮಾರುಕಟ್ಟೆ ನಿರ್ಮಿಸಲಾಗುವುದು.